"ಉಡುಪಿ ಜಿಲ್ಲೆಗೆ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ?": ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ

ಸುನೀಲ್ ಕುಮಾರ್ / ದಿನೇಶ್ ಗುಂಡೂರಾವ್ (Photo source: X)
ಬೆಂಗಳೂರು: ‘ಸುನೀಲ್ ಕುಮಾರ್ ಅವರೇ, ನೀವು ಇಂಧನ ಸಚಿವರಾಗಿದ್ದಾಗ ರಾಜ್ಯದಲ್ಲಿ ಎಷ್ಟು ಪ್ರಮಾಣದ ವಿದ್ಯುತ್ ಉದ್ಪಾದನೆ ಮಾಡಿದ್ದೀರಿ?. ಕೌನ್ಸಿಲಿಂಗ್ ಮೂಲಕ ಎಷ್ಟು ಸಿಬ್ಬಂದಿಗಳಿಗೆ ವರ್ಗಾವಣೆ ಆದೇಶ ಮಾಡಿದ್ದೀರಿ?. ಇಂಧನ ಇಲಾಖೆಯಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ರೀ?. ಕಾರ್ಕಳದ ಜನರು ಮತ ಕೊಟ್ಟು ಗೆಲ್ಲಿಸಿದ್ದಕ್ಕಾಗಿ ಋಣಭಾರ ಕಮ್ಮಿ ಮಾಡಿಕೊಳ್ಳುವುದಕ್ಕಾದರೂ ಉಡುಪಿ ಜಿಲ್ಲೆಗೆ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ?’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯವಾಗಿಸುವ ಬಿಜೆಪಿಯ ಸುಳ್ಳಿನ ಫ್ಯಾಕ್ಟರಿಯ ಮತ್ತೊಂದು ವಿಫಲ ಹುನ್ನಾರವಿದು. ಸುನೀಲ್ ಕುಮಾರ್ ಅವರೇ, ದಿನಾಂಕವಿಲ್ಲದ, ರೆಫರೆನ್ಸ್ ಸಂಖ್ಯೆಯಿಲ್ಲದ ಒಂದು ನಕಲಿ ಪತ್ರವನ್ನು ಹಿಡಿದು ಜನರಲ್ಲಿ ಗೊಂದಲ ಸೃಷ್ಟಿಸಲು ಹೊರಟಿರುವ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ?’ ಎಂದು ಕೇಳಿದ್ದಾರೆ.
ಆರೋಗ್ಯ ಇಲಾಖೆಯ ಅಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಲು ನಿಯಮಗಳಲ್ಲಿ ಅವಕಾಶವೇ ಇಲ್ಲ ಎಂಬುದು ತಿಳಿಯದಷ್ಟು ಬೌದ್ಧಿಕ ದಿವಾಳಿತನವೇ?. ಈ ನಕಲಿ ಪತ್ರದ ಬಗ್ಗೆ ನಮ್ಮ ಮುಖ್ಯಮಂತ್ರಿ ಕಾರ್ಯಾಲಯದಿಂದ ಈಗಾಗಲೇ ದೂರು ದಾಖಲಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
‘ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಸಮೀಪದ ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿರುವ ‘ಪರಶುರಾಮ ಥೀಮ್ ಪಾರ್ಕ್'ನಲ್ಲಿ ಅನಾಥವಾಗಿರುವ ಪರುಶುರಾಮ ಪ್ರತಿಮೆ ಬಗ್ಗೆ ನಿಜವಾಗಿ ನೀವು ವಿಚಾರ ಮಾಡಬೇಕಾದದ್ದು. ಕಿಕ್ಬ್ಯಾಕ್ ಅನುಮಾನ ಇರುವುದು ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ, ಥೀಮ್ ಪಾರ್ಕ್ ನಿರ್ಮಾಣ ಯೋಜನೆಯಲ್ಲಿ. ದೊಡ್ಡ ಸಂಭ್ರಮದ ಕಾರ್ಯಕ್ರಮ ಮಾಡಿ ‘ಕೊಡಲಿ ಹಿಡಿದ ಪರುಶುರಾಮ’ನನ್ನೇ ಅತಂತ್ರ ಮಾಡಿದ ಮಹಾನುಭಾವರು ನೀವು... ಪರಶುರಾಮನ ಪಂಚೇಂದ್ರಿಯಕ್ಕೂ (ಪಂಚ ಅಂಗಕ್ಕೂ) ಅಪಚಾರ ಮಾಡಿದ ನಿಮ್ಮಿಂದ ನೈತಿಕತೆ, ಪಾರದರ್ಶಕ ಆಡಳಿತದ ಪಾಠ ಕಲಿಯಬೇಕಾದ ದಿವಾಳಿತನ ನಮ್ಮ ಸರಕಾರಕ್ಕಾಗಲಿ, ಜನನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಲಿ-ನನಗಾಗಲಿ ಇಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಸಾರ್ವಜನಿಕರ ಹಣವನ್ನು ನುಂಗುವುದು ‘ಕ್ರಿಮಿನಲ್ ಅಪರಾಧ' ಎಂದು ನ್ಯಾಯಾಧೀಶರೇ ಹೇಳಿರುವಾಗ ನಾಚಿಕೆ ಬಿಟ್ಟು ನಕಲಿ ದಾಖಲೆಗಳೊಂದಿಗೆ ತಿರುಗಾಡುತ್ತಿದ್ದೀರಿ. ನಮ್ಮ ಇಲಾಖೆ ಬಗ್ಗೆ ಸುಳ್ಳು ಹರಡುವ ಮೊದಲು, ನ್ಯಾಯಾಲಯದಲ್ಲಿ ನಿಮ್ಮ ಹಗರಣಗಳಿಗೆ ಉತ್ತರ ನೀಡಲು ಸಿದ್ಧರಾಗಿ. ಸತ್ಯದ ಕುಣಿಕೆಯಲ್ಲಿ ಬಿದ್ದಿರುವ ನಿಮ್ಮ ಸುಳ್ಳುಗಳ ಸರಮಾಲೆಯನ್ನು ಕಂಡು ರೇಜಿಗೆಯಾಗಿದೆ. ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ವೈದ್ಯರು, ಶುಶ್ರೂಷಕರು ಸೇರಿದಂತೆ 5,600ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಿ ಆಡಳಿತಕ್ಕೆ ಪಾರದರ್ಶಕತೆ ತಂದ ಹೆಗ್ಗಳಿಕೆ ನಮ್ಮದು ಎಂದು ಅವರು ಉಲ್ಲೇಖಿಸಿದ್ದಾರೆ.
‘ಸಚಿವರಾಗಿದ್ದ ವೇಳೆ ನೀವು ಮಾಡಿದ ಕೆಲಸಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಈ ರೀತಿ ನಿರಂತರವಾಗಿ ಆತ್ಮವಂಚನೆ ಮಾಡಿಕೊಂಡು, ನಂಬಿದವರಿಗೂ ವಂಚಿಸಿ ಜನರ ಮಧ್ಯೆ ಅದೇಗೇ ತಿರುಗಾಡುವಿರಿ?’
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯವಾಗಿಸುವ ಬಿಜೆಪಿಯ ಸುಳ್ಳಿನ ಫ್ಯಾಕ್ಟರಿಯ ಮತ್ತೊಂದು ವಿಫಲ ಹುನ್ನಾರವಿದು. ಸನ್ಮಾನ್ಯ @SunilKumarK ಅವರೇ, ದಿನಾಂಕವಿಲ್ಲದ, ರೆಫರೆನ್ಸ್ ಸಂಖ್ಯೆಯಿಲ್ಲದ ಒಂದು ನಕಲಿ ಪತ್ರವನ್ನು ಹಿಡಿದು ಜನರಲ್ಲಿ ಗೊಂದಲ ಸೃಷ್ಟಿಸಲು ಹೊರಟಿರುವ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ? ಆರೋಗ್ಯ ಇಲಾಖೆಯ… https://t.co/o3XvnYVOvt pic.twitter.com/Ma55QHB5IN
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 13, 2026







