ಆಕಾಂಕ್ಷಾ ನಿಗೂಢ ಸಾವು ಪ್ರಕರಣದ ಸೂಕ್ತ ತನಿಖೆಗೆ ಪಂಜಾಬ್ ಸರಕಾರಕ್ಕೆ ಒತ್ತಾಯ: ಸಚಿವ ದಿನೇಶ್ ಗುಂಡೂರಾವ್
"ಇದೊಂದು ಅಸಹಜ ಸಾವು ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ"

ಬೆಂಗಳೂರು: ಧರ್ಮಸ್ಥಳ ಮೂಲದ ವಿದ್ಯಾರ್ಥಿನಿ ಆಕಾಂಕ್ಷಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ಪಂಜಾಬ್ ಸರಕಾರವನ್ನು ಒತ್ತಾಯಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಆಕಾಂಕ್ಷಾ ಪಂಜಾಬ್ ನಲ್ಲಿ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಇದೊಂದು ಅಸಹಜ ಸಾವು ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಉಪನ್ಯಾಸಕ ಮ್ಯಾಥ್ಯೂ ಅವರ ಕಿರುಕುಳದಿಂದ ಆಕಾಂಕ್ಷಾ ಸಾವಿಗೀಡಾಗಿದ್ದಾರೆ ಎಂದು ಅವರ ಕುಟುಂಬ ವರ್ಗದವರು ಆರೋಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆಕಾಂಕ್ಷಾ ನಿಗೂಢ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸುಂತೆ ನಾನು ಪಂಜಾಬ್ ಸರಕಾರವನ್ನು ಒತ್ತಾಯಿಸುತ್ತೇನೆ. ಪ್ರಕರಣ ಕುರಿತು ನಾನು ರಾಜ್ಯದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚೆ ನಡೆಸಿದ್ದು, ಪಂಜಾಬ್ ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಕಾಂಕ್ಷಾ ಮೃತದೇಹವನ್ನು ಕುಟುಂಬ ವರ್ಗದವರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅಲ್ಲದೇ ಆಕಾಂಕ್ಷಾ ನಿಗೂಢ ಸಾವಿನ ಕುರಿತು ಸೂಕ್ತ ತನಿಖೆ ನಡೆಸುವ ನಿಟ್ಟಿನಲ್ಲಿ ಪಂಜಾಬ್ ಸರಕಾರದ ಮುಖ್ಯಕಾರ್ಯದರ್ಶಿ ಅವರೊಂದಿಗೆ ಮಾತನಾಡುವಂತೆ ಸೂಚಿಸಿದ್ದೇನೆ. ಈ ನಿಟ್ಟಿನಲ್ಲಿ ಪಂಜಾಬ್ ಸರಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಚರ್ಚೆ ನಡೆಸಿದ್ದು, ಪಂಜಾಬ್ ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕಾಂಕ್ಷಾ ಅವರ ಕುಟುಂಬದ ಬೆಂಬಲಕ್ಕೆ ರಾಜ್ಯ ಸರಕಾರ ನಿಲ್ಲಲಿದ್ದು, ಸರಕಾರದಿಂದ ಅಗತ್ಯ ಸಹಕಾರ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.