‘ಎಚ್ಡಿಕೆ ವಿರುದ್ಧ ಆರೋಪ ಪಟ್ಟಿ’ ಸಲ್ಲಿಸಲು ರಾಜ್ಯಪಾಲರು ಅನುಮತಿ ನೀಡಲಿ : ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್
ಬೆಂಗಳೂರು : ನಿಯಮ ಉಲ್ಲಂಘಿಸಿ ಎಸ್ಎಸ್ವಿಎಂ ಕಂಪೆನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ್ದ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ರಾಜ್ಯಪಾಲರ ಬಳಿ ಅನುಮತಿ ಕೇಳಿದ್ದಾರೆ. ರಾಜ್ಯಪಾಲರು ತಾವು ನಿಷ್ಪಕ್ಷಪಾತರು ಹಾಗೂ ಸಂವಿಧಾನಬದ್ಧವಾಗಿ ನಡೆಯುವವರು ಎಂದಾದರೆ ಕೂಡಲೆ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಗುರುವಾರ ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದಲ್ಲಿ ತರಾತುರಿಯಲ್ಲಿ ಕಾನೂನು ಕ್ರಮಕ್ಕೆ ಅನುಮತಿ ನೀಡಿದ್ದ ರಾಜ್ಯಪಾಲರು, ಕುಮಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ವಿಭಿನ್ನವಾಗಿ ವರ್ತಿಸುತ್ತಿದ್ದಾರೆ. ಹಲವು ಕುಂಟು ನೆಪ ಹೇಳುತ್ತಾ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡಲು ಮೀನಾ ಮೇಷ ಎಣಿಸುತ್ತಿದ್ದಾರೆ. ಸಿದ್ದರಾಮಯ್ಯರಿಗೊಂದು ನ್ಯಾಯ, ಕುಮಾರಸ್ವಾಮಿಯವರಿಗೊಂದು ನ್ಯಾಯವೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲರು ಕುಮಾರಸ್ವಾಮಿ ವಿಚಾರದಲ್ಲಿ ಸಹಜ ನ್ಯಾಯ ಪರಿಪಾಲನೆ ಮಾಡಲಿ. ಸಿದ್ದರಾಮಯ್ಯ ವಿರುದ್ಧ ತೋರಿದ್ದ ಆಸಕ್ತಿಯನ್ನು ಕುಮಾರಸ್ವಾಮಿ ಪ್ರಕರಣದಲ್ಲೂ ತೋರಿಸಲಿ. ಆಗ ಆ ಹುದ್ದೆಗೆ ಒಂದು ಘನತೆ ಲಭಿಸಲಿದೆ. ಇಲ್ಲದೆ ಹೋದರೆ ರಾಜ್ಯಪಾಲರು ಬಿಜೆಪಿಯ ಏಜೆಂಟ್ ಎಂಬುದು ಸಾಬೀತಾಗುತ್ತದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿ SSVM ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ್ದ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ರಾಜ್ಯಪಾಲರ ಬಳಿ ಅನುಮತಿ ಕೇಳಿದ್ದಾರೆ. ರಾಜ್ಯಪಾಲರು ತಾವು ನಿಷ್ಪಕ್ಷಪಾತರು ಹಾಗೂ ಸಂವಿಧಾನಬದ್ದವಾಗಿ ನಡೆಯುವವರು ಎಂದಾದರೆ ಈ ಕೂಡಲೇ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡಬೇಕು. @siddaramaiah ರ ವಿರುದ್ದ… pic.twitter.com/k1IBCgORsE
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 27, 2025