ನೇರ ನೇಮಕಾತಿ | ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ : ರಾಜ್ಯ ಸರಕಾರ ಆದೇಶ

ಬೆಂಗಳೂರು, ಸೆ.29: ನೇರ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳ ಸಡಿಲಿಕೆ ನೀಡಿದ್ದು, ಸೋಮವಾರದಂದು ರಾಜ್ಯ ಸರಕಾರವು ಆದೇಶ ಹೊರಡಿಸಿದೆ.
2025ರ ಸೆ.6ರಿಂದ 2027ರ ಡಿ.31ರ ವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ನೀಡಲಾಗಿದೆ.
ಪರಿಶಿಷ್ಟ ಜಾತಿ(ಎಸ್‍ಸಿ)ಯ ಒಳಮೀಸಲಾತಿ ಜಾರಿಯಾಗುವವರೆಗೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅಥವಾ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು 2024ರ ಅ.28ರಿಂದ ಮುಂದಿನ ಆದೇಶದವರೆವಿಗೂ ಹೊರಡಿಸಬಾರದೆಂದು ಎಲ್ಲ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಲಾಗಿತ್ತು. ಈಗ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡಲಾಗಿದ್ದು, ಈಗ ನೇರ ನೇಮಕಾತಿಗಳಿಗೆ ವಯೋಮಿತಿ ಸಡಲಿಕೆ ಮಾಡಲಾಗಿದೆ.







