ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರನ್ನು ವಜಾಗೊಳಿಸಿ, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ: ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Photo: PTI)
ಬೆಂಗಳೂರು: ಸೆ. 23 ರಂದು ʼಇಂಡಿಯನ್ ಎಕ್ಸ್ಪ್ರೆಸ್ʼ ನ ತನಿಖಾ ವರದಿಯಲ್ಲಿ ಬಯಲಾಗಿರುವ ಆಘಾತಕಾರಿ ಮಾಹಿತಿಗಳ ಆಧಾರದಲ್ಲಿ ರಾಷ್ಟ್ರಪತಿಯವರು ಕೂಡಲೇ ಮಧ್ಯಪ್ರವೇಶಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಿ, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ (ಕೆಆರ್ಎಂಓ) ಆಗ್ರಹಿಸಿದೆ.
ಎಸ್ಐಆರ್ ಅನ್ನು ದುರುದ್ದೇಶದಿಂದ ರೂಪಿಸಲಾದ ಮತದಾನದ ಹಕ್ಕು ಕಸಿಯುವ ಅಸಾಂವಿಧಾನಿಕ ಕ್ರಮ; ಇದನ್ನು ಕಾನೂನುಬದ್ಧ ಅಧಿಕಾರವಿಲ್ಲದೆ ಜಾರಿಗೊಳಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಹಲವಾರು ಬಾರಿ ಕೇಳಿಬಂದಿತ್ತು. ಅದನ್ನೇ ಈಗ ʼಇಂಡಿಯನ್ ಎಕ್ಸ್ಪ್ರೆಸ್ʼ ನ ತನಿಖಾ ವರದಿಯು ಸಾಬೀತುಪಡಿಸಿದೆ. ಜನರ ಮತದಾನದ ಹಕ್ಕನ್ನು ಕಸಿಯುವ ಈ ಸಂವಿಧಾನ ವಿರೋಧಿ SIR ಅನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಕೆಆರ್ಎಂಓ ಆಗ್ರಹಿಸಿದೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತವೂ ಅತ್ಯಮೂಲ್ಯ. ಅದು ದೇಶದ ಜನರ ಪರಮಾಧಿಕಾರ. ಜನರ ಮತದಾನದ ಹಕ್ಕನ್ನು ಕಾನೂನು ಬಾಹಿರವಾಗಿ ಕಸಿದುಕೊಳ್ಳುವುದು ದೇಶಕ್ಕೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾಡುವ ಮಹಾ ದ್ರೋಹವಾಗಿದೆ. ಅದಕ್ಕಾಗಿ ಜ್ಞಾನೇಶ್ ಕುಮಾರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಕೆಆರ್ಎಂಓ ಆಗ್ರಹಿಸಿದೆ.
ʼಇಂಡಿಯನ್ ಎಕ್ಸ್ಪ್ರೆಸ್ʼ ವರದಿ ಪ್ರಕಾರ, ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಹತ್ತು ತಿಂಗಳ ಅವಧಿಯಲ್ಲಿ ಕನಿಷ್ಠ ಹದಿನಾಲ್ಕು ಬಾರಿ, ತಮ್ಮ ತಿಳಿವಳಿಕೆಯಿಲ್ಲದೆ ಆಯೋಗದ ಹೆಸರಿನಲ್ಲಿ ಹೊರಡಿಸಲಾದ ಆದೇಶಗಳಿಗೆ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವೆಲ್ಲವೂ ಹೊಸ ಮತದಾರರ ನೋಂದಣಿ, ಹೆಸರುಗಳ ಅಳಿಸುವಿಕೆ ಮತ್ತು ಮರುಸ್ಥಾಪನೆ, ನ್ಯಾಯಾಂಗ ಅಧಿಕಾರಿಗಳು ಮರುಸ್ಥಾಪಿಸಿದ ಮತದಾರರ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳು ಹಾಗೂ ಮತದಾರರ ಪಟ್ಟಿಯ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ್ದ ಮಹತ್ವದ ಆದೇಶಗಳು. ಚುನಾವಣಾ ಆಯುಕ್ತ ಸಂಧು ಅವರು ಅಂತಹ ಒಂದು ಕ್ರಮವನ್ನು “ಅನಧಿಕೃತ ಮತ್ತು ಕಾನೂನುಬಾಹಿರ” ಎಂದು ಕರೆದಿದ್ದಾರೆ. ಚುನಾವಣಾ ಆಯುಕ್ತ ಜೋಶಿ, ನಿಯಮಗಳಿಗೆ ತಿದ್ದುಪಡಿ ಮಾಡದೆ Form 6ರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ದಾಖಲಿಸಿದ ನಂತರವೇ ಆ ಬದಲಾವಣೆ ಮಾಡಲಾಯಿತು; ಆಯುಕ್ತ ಸಂಧು ಕೂಡ ಅದಕ್ಕೆ ಸಮ್ಮತಿಸಿದ್ದರು. ಆ ಬದಲಾವಣೆ ಇಂದಿಗೂ ಜಾರಿಯಲ್ಲಿದೆ. ಮತದಾರರ ಪಟ್ಟಿಯ ದತ್ತಾಂಶವನ್ನು ಕಾನೂನುಬದ್ಧವಾಗಿ ನಿಯಂತ್ರಿಸುವ ಅಧಿಕಾರ ಹೊಂದಿರುವ ಶಾಸನಬದ್ಧ ಅಧಿಕಾರಿಗಳಿಂದ ತಪ್ಪಿಸಿ, ಅದನ್ನು ಕೇಂದ್ರೀಕೃತಗೊಳಿಸಲಾಗುತ್ತಿದೆ ಎಂಬುದನ್ನೂ ಇಬ್ಬರೂ ಆಯುಕ್ತರು ದಾಖಲಿಸಿದ್ದಾರೆ. ಇಬ್ಬರು ಚುನಾವಣಾ ಆಯುಕ್ತರಿಂದಲೇ ಇಷ್ಟೆಲ್ಲಾ ಆಕ್ಷೇಪಣೆಗಳಿದ್ದಾಗಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸಂವಿಧಾನ ವಿರೋಧಿ, ಕಾನೂನು ವಿರೋಧಿ ಹಾಗು ಜನವಿರೋಧಿ ಕ್ರಮಗಳನ್ನು ಯಾಕೆ ತೆಗೆದುಕೊಂಡರು, ಯಾರ ಅಣತಿ ಮೇರೆಗೆ ತೆಗೆದುಕೊಂಡರು ಎಂಬುದು ಸಮಗ್ರ, ನಿಷ್ಪಕ್ಷ ತನಿಖೆಯಿಂದ ಮಾತ್ರ ಹೊರಬರಲು ಸಾಧ್ಯ. ಹಾಗಾಗಿ, ರಾಷ್ಟ್ರಪತಿಯವರು ಕೂಡಲೇ ಮಧ್ಯಪ್ರವೇಶಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಿ, ಅವರ ವಿರುದ್ಧ ತನಿಖೆಗೆ ಕ್ರಮ ಕೈಗೊಳ್ಳಬೇಕು ಎಂದು ಕೆಆರ್ಎಂಓ ಆಗ್ರಹಿಸಿದೆ.
SIR ಅನ್ನು ಕೂಡಲೇ ರದ್ದು ಮಾಡಿ ಮೊದಲು ಇದ್ದ ಮತದಾರರ ಪಟ್ಟಿಗಳನ್ನೇ ಮರುಸ್ಥಾಪಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣ ರಾಜೀನಾಮೆ ನೀಡದಿದ್ದರೆ, ಅವರ ವಿರುದ್ಧ ತಕ್ಷಣ ಮಹಾಭಿಯೋಗ ಪ್ರಕ್ರಿಯೆ ಆರಂಭಿಸಬೇಕು. ಚುನಾವಣಾ ಆಯುಕ್ತರನ್ನು ಕೇಂದ್ರ ಸರ್ಕಾರವೇ ನೇಮಕ ಮಾಡುವ ಮತ್ತು ಅಯುಕ್ತರಿಗೆ ಜೀವನಪರ್ಯಾಂತ ಕಾನೂನು ಕ್ರಮದಿಂದ ರಕ್ಷಣೆ ಒದಗಿಸುವ 2023ರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆಯನ್ನು ರದ್ದುಗೊಳಿಸಬೇಕು. ಜ್ಞಾನೇಶ್ ಕುಮಾರ್ ಅವಧಿಯಲ್ಲಿ ಚುನಾವಣಾ ಆಯೋಗ ತೆಗೆದುಕೊಂಡ ಎಲ್ಲಾ ತೀರ್ಮಾನಗಳು ಮತ್ತು ಪ್ರಕ್ರಿಯೆಗಳನ್ನು ತನಿಖೆ ಮಾಡಬೇಕು. ಚುನಾವಣಾ ಆಯೋಗ ಮತ್ತು ಚುನಾವಣ ಪ್ರಕ್ರಿಯೆಗಳು ಪ್ರಜಾತಾಂತ್ರಿಕಗೊಳ್ಳಬೇಕು. ಇದಕ್ಕಾಗಿ ಎಲ್ಲ ಪ್ರಮುಖ ವಿಪಕ್ಷಗಳು ಒಂದಾಗಿ ಹೋರಾಟ ನಡೆಸಬೇಕು ಎಂದು ಕೆಆರ್ಎಂಓ ಆಗ್ರಹಿಸಿದೆ.
ಬೆಳಗಾವಿ ಹಾಗು ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಮುಸ್ಲಿಂ ಸಮುದಾಯದ ಮತದಾರರ ಹೆಸರುಗಳನ್ನು ಕಾನೂನುಬಾಹಿರವಾಗಿ ಹಾಗೂ ಯೋಜಿತವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಮುಂದಾಗಿರುವುದು ಬೆಳಕಿಗೆ ಬಂದಿದೆ. ಇದು ಅತ್ಯಂತ ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದೆ. ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಮುಂದಾಗಿರುವವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ ಆಗ್ರಹಿಸಿದೆ.






