ಶಾಸಕ ಸ್ಥಾನದಿಂದ ಮುನಿರತ್ನ ಅವರನ್ನು ಅನರ್ಹಗೊಳಿಸಿ: ಡಿ.ಕೆ. ಸುರೇಶ್

ಬೆಂಗಳೂರು: ಜಾತಿ ನಿಂದನೆ, ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಹಾಗೂ ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಶಾಸಕ ಮುನಿರತ್ನ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕು ಹಾಗೂ ಸ್ಪೀಕರ್ ಅವರು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದರು.
ಶನಿವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುನಿರತ್ನ ಅವರಂತ ನಾಯಕರು ರಾಜ್ಯದಲ್ಲಿ ಇದ್ದರೆ ಜಾತಿ ಸಂಘರ್ಷಗಳು ಹೆಚ್ಚಾಗುತ್ತವೆ. ಆದ ಕಾರಣಕ್ಕೆ ಇವರ ಮೇಲೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಲ್ಲಿ ಮನವಿ ಮಾಡುತ್ತೇನೆ ಎಂದರು.
ಬಿಜೆಪಿ ಕೇಂದ್ರ ನಾಯಕರಿಗೆ ಕಿವಿ ಕೇಳಿಸುತ್ತಿದ್ದರೆ, ಕೀಳು ಮಟ್ಟದ ಪದ ಬಳಕೆ ಮಾಡಿರುವ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಿ. ಸಮುದಾಯದ ತಾಯಂದಿರನ್ನು ಮುನಿರತ್ನ ಅವಮಾನಿಸಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಇದಕ್ಕೆ ಏನು ಉತ್ತರಿಸುತ್ತೀರಾ? ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಇದರ ಬಗ್ಗೆ ಉತ್ತರಿಸಬೇಕು ಎಂದು ಸುರೇಶ್ ಹೇಳಿದರು.
ಬಾಯಲ್ಲಿ ರಾಮನ ಜಪ, ಮಹಿಳೆಯರಿಗೆ ಅಪಮಾನ: ಒಂದು ಕಡೆ ರಾಮನ, ಸಂಸ್ಕøತಿಯ ಜಪ ಮಾಡುತ್ತ ಇನ್ನೊಂದು ಕಡೆ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದು. ಎಲ್ಲಿ, ಯಾರ ಬಳಿ ಮಾತನಾಡುತ್ತ ಇದ್ದೀನಿ ಎನ್ನುವ ಅರಿವೂ ಅವರಿಗಿಲ್ಲದೇ ಹೆಂಡತಿ, ತಾಯಿಯನ್ನು ಮಂಚಕ್ಕೆ ಕರೆಯುವ ಕೆಟ್ಟ ಪ್ರವೃತ್ತಿ ಕೇಂದ್ರದ ಬಿಜೆಪಿ ನಾಯಕರಿಗೆ ಕೇಳಿಸುತ್ತಿಲ್ಲವೇ? ಆರೆಸ್ಸೆಸ್ ನಂಟು ಇಟ್ಟುಕೊಂಡಿರುವ ಇವರ ನಡವಳಿಕೆ ನಾಚಿಕೆ ತರುವಂತಹದ್ದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕಲಿಗರನ್ನು ಅಪಮಾನ ಮಾಡಲಾಗಿದೆ. ಈಗ ಸಮುದಾಯದ ಪರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ನಿಲ್ಲುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್, ಇದರ ಬಗ್ಗೆ ಕುಮಾರಸ್ವಾಮಿ ಏನೇನು ಹೇಳಿಕೆ ನೀಡುತ್ತಾರೆ ಎಂಬುದನ್ನು ಮಧ್ಯಮದವರು ಗಮನಿಸಿ ನೋಡಿ. ನರೇಂದ್ರ ಮೋದಿಗೆ ಹೇಳಿ ಮುನಿರತ್ನರನ್ನು ಪಕ್ಷ ವಜಾ ಮಾಡಿಸುತ್ತಾರೆ ಎಂದು ಹೇಳಿದರು.
ರೇಣುಕಾಸ್ವಾಮಿಗೆ ಆದ ಗತಿ ನಿನಗೆ ಆಗುತ್ತದೆ ಎಂದು ಗುತ್ತಿಗೆದಾರನಿಗೆ ಮುನಿರತ್ನ ಬೆದರಿಕೆ ಹಾಕಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಸುರೇಶ್, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದೀಪಕ್, ಮುನಿರತ್ನ ಸಂಬಂಧಿ. ನೂರಕ್ಕೆ ನೂರರಷ್ಟು ಇದಕ್ಕೆ ಇವರ ಸಂಬಂಧ ಇದ್ದೇ ಇರುತ್ತದೆ. ಆಡಿಯೋದಲ್ಲಿ ರೌಡಿ ಸೈಲೆಂಟ್ ಸುನೀಲ್ ಹೆಸರು ಹೇಳಿದ್ದಾರೆ. ಅಂದರೆ ಯಾವ ರೀತಿಯ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂಬುದು ಇದನ್ನು ನೋಡಿದರೆ ತಿಳಿಯುತ್ತದೆ ಎಂದರು.
ಗೃಹ ಮಂತ್ರಿ ಇದರ ಬಗ್ಗೆ ಹೆಚ್ಚು ಗಮನ ಕೊಡಬೇಕು. ಮುನಿರತ್ನ ಮೇಲೆ ಯಾವ, ಯಾವ ಆರೋಪಗಳಿಗೆ ಅದನ್ನು ಮುಂದಿಟ್ಟುಕೊಂಡು ಕಾನೂನು ಕ್ರಮ ತೆಗೆದುಕೊಳ್ಳಬೇಕು. ಒಕ್ಕಲಿಗರ ಹಾಗೂ ದಲಿತರ ಮತ ಬೇಕಾದಾಗ ಕಾಲಿಗೆ ಬೀಳುವ ಮುನಿರತ್ನ, ಇಷ್ಟು ಹೀನಾಯವಾಗಿ ಮಾತನಾಡುತ್ತಾನೆ. ಏನೇನೋ ಪ್ರಸಾರ ಮಾಡುವ ಮಾಧ್ಯಮಗಳು, ಇಂತಹ ಸಮಾಜ ಘಾತುಕ ಶಕ್ತಿಯ ವಿರುದ್ಧ ಪ್ರಸಾರ ಮಾಡಬೇಕು ಎಂದು ಅವರು ಹೇಳಿದರು.
ನಾಗಮಂಗಲದಲ್ಲಿನ ಗಲಾಟೆ ಕಾಂಗ್ರೆಸ್ ಚಿತಾವಣೆ ಎಂದು ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಅವರು, ವಾರಕ್ಕೊಮ್ಮೆ ಬಂದು ಏನೇನೋ ಮಾತನಾಡುವ ಕುಮಾರಸ್ವಾಮಿಯೇ ಇದಕ್ಕೆ ಕಾರಣ ಇರಬಹುದು ಎಂದು ನಾನೂ ಹೇಳಬಹುದು ಅಲ್ಲವೇ? ಅವರು ಏನು ಆರೋಪ ಮಾಡುತ್ತಾರೋ ಆದೇ ರೀತಿ ನಾನೂ ಆರೋಪ ಮಾಡುತ್ತೇನೆ ಎಂದರು.
ರಾಹುಲ್ ಗಾಂಧಿ ಭೇಟಿ ಕಾಕತಾಳೀಯ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಟುಂಬದ ಜೊತೆ ಪ್ರವಾಸಕ್ಕೆ ತೆರಳಿ ಐದಾರು ವರ್ಷಗಳೇ ಕಳೆದಿದ್ದವು. ಅನೇಕ ಬಾರಿ ನ್ಯಾಯಾಲಯದಿಂದ ಅನುಮತಿ ಪಡೆಯಲು ಆಗಿರಲಿಲ್ಲ. ಅಮೇರಿಕಾ ಭೇಟಿ ಬಗ್ಗೆ ಮಾಧ್ಯಮಗಳು ಉಹಾಪೋಹದ ಸುದ್ದಿಗಳನ್ನು ಮಾಡುತ್ತಿವೆ. ಅಲ್ಲಿ ರಾಹುಲ್ ಗಾಂಧಿ ಅವರ ಭೇಟಿ ಕಾಕತಾಳೀಯ ಎಂದು ಸುರೇಶ್ ಹೇಳಿದರು.







