ಬಸ್ ಚಾಲಕನಾಗಿದ್ದ ಯತ್ನಾಳ್ ಸಕ್ಕರೆ ಕಾರ್ಖಾನೆ ಆರಂಭಿಸುವವರೆಗೆ ಬೆಳೆದದ್ದು ಹೇಗೆ?: ಎಂ.ಪಿ.ರೇಣುಕಾಚಾರ್ಯ ಪ್ರಶ್ನೆ
"ಭಿನ್ನಮತೀಯ ನಾಯಕರನ್ನು ಬಿಜೆಪಿಯಿಂದ ಉಚ್ಛಾಟಿಸಬೇಕು"

ಎಂ.ಪಿ.ರೇಣುಕಾಚಾರ್ಯ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿರುವ ಭಿನ್ನಮತೀಯ ನಾಯಕರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಬಿಜೆಪಿ ಹೈಕಮಾಂಡ್ಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಬುಧವಾರ ಸದಾಶಿವನಗರದಲ್ಲಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ್, ಬಿ.ಪಿ.ಹರೀಶ್ರನ್ನು ಯಾವುದೇ ಮುಲಾಜಿಲ್ಲದೇ ಪಕ್ಷದಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು.
ಭಿನ್ನಮತೀಯ ನಾಯಕರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಹೊಸದಿಲ್ಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ವಾಸ್ತವವಾಗಿ ಪಕ್ಷದ ಯಾವುದೇ ನಾಯಕರ ಭೇಟಿಗೆ ಅವರಿಗೆ ಅವಕಾಶವೇ ಸಿಗಲಿಲ್ಲ. ಒಂದು ವೇಳೆ ಬಿಜೆಪಿ ರಾಷ್ಟ್ರೀಯ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದರೆ ಫೋಟೋ ಬಿಡುಗಡೆ ಮಾಡಲಿ ಎಂದು ರೇಣುಕಾಚಾರ್ಯ ಸವಾಲು ಹಾಕಿದರು.
ವಿಜಯಪುರ ಜಿಲ್ಲೆಯ ಬಬಲೇಶ್ವರದವರಾದ ಬಸನಗೌಡ ಪಾಟೀಲ್ ಯತ್ನಾಳ್, ಅಲ್ಲಿ ಯಾಕೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ? ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಜೊತೆ ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಜೆಸಿಬಿ, ಬಸ್ಸು ಚಾಲಕನಾಗಿದ್ದ ಯತ್ನಾಳ್ ಇವತ್ತು ಸಕ್ಕರೆ ಕಾರ್ಖಾನೆ ಆರಂಭಿಸುವವರೆಗೆ ಬೆಳೆದದ್ದು ಹೇಗೆ? ಎಂದು ಅವರು ಪ್ರಶ್ನಿಸಿದರು.
ಈ ಹಿಂದೆ ಬಿಜೆಪಿಯಿಂದ ಉಚ್ಛಾಟನೆಯಾದಾಗ, ಯಡಿಯೂರಪ್ಪ ಕಾಲು ಹಿಡಿದು ಪಕ್ಷಕ್ಕೆ ಮರು ಸೇರ್ಪಡೆಯಾದದ್ದು ಮರೆತು ಹೋಗಿದೆಯೇ? ಮಿಸ್ಟರ್ ಯತ್ನಾಳ್. ಯಡಿಯೂರಪ್ಪ ಹಾಗೂ ಅವರ ಕುಟುಂಬದ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡು ಎಂದು ಏಕವಚನದಲ್ಲೆ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಬಿಜೆಪಿ ಸೇರ್ಪಡೆಯಾದಾಗ, ಕುಮಾರ್ ಬಂಗಾರಪ್ಪ ಅವರೊಂದಿಗೆ ಬಿಜೆಪಿಗೆ ಬಂದಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿದ್ದಕ್ಕೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸುವಂತಾಯಿತು ಅನ್ನೋದನ್ನು ಕುಮಾರ್ ಬಂಗಾರಪ್ಪ ನೆನಪಿನಲ್ಲಿಟ್ಟುಕೊಳ್ಳಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಕುಮಾರ್ ಬಂಗಾರಪ್ಪ ಪ್ರಯತ್ನ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ನಿನ್ನ ಸಹೋದರನೇ ಕಾಂಗ್ರೆಸ್ ಸೇರ್ಪಡೆಗೆ ಅಡ್ಡಗಾಲು ಹಾಕಿದ ಅನ್ನೋದು ಗೊತ್ತಿದೆ. ಈಗ ವಿಜಯೇಂದ್ರ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ರಾಷ್ಟ್ರಮಟ್ಟದ ನಾಯಕನಾಗಲು ಹೊರಟ್ಟಿದ್ದೀಯಾ ಎಂದು ರೇಣುಕಾಚಾರ್ಯ ಟೀಕಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡು ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬಿ.ಪಿ.ಹರೀಶ್ ಸೋಲಿಸಿದರು. ಹರಿಹರ ಕ್ಷೇತ್ರದಲ್ಲಿ ಹರೀಶ್ ಶಾಸಕನಾಗಿ ಚುನಾಯಿತರಾಗಲು ಯಡಿಯೂರಪ್ಪನವರೇ ಕಾರಣ ಅನ್ನೋದನ್ನು ಮರೆಯಬಾರದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಶಾಸಕ ವೈ.ಸಂಪಂಗಿ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀ ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.