ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣ| ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದ ಸಚಿವ ದಿನೇಶ್ ಗುಂಡೂರಾವ್

ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ರಹಸ್ಯ ಅಂತ್ಯಸಂಸ್ಕಾರ ಪ್ರಕರಣ ಸಂಬಂಧ ರಾಜ್ಯ ಸರಕಾರ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಧರ್ಮಸ್ಥಳದ ವ್ಯಕ್ತಿಯೊಬ್ಬರು ತಾವು ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಮೃತದೇಹಗಳನ್ನು ಹೂತಿರುವುದಾಗಿ ಹೇಳಿಕೆ ದಾಖಲಿಸಿದ ಬೆನ್ನಲ್ಲೇ ಇದೀಗ ನಾಪತ್ತೆ, ಅಸಹಜ ಸಾವುಗಳು ಮತ್ತು ಲೈಂಗಿಕ ದೌರ್ಜನ್ಯಗಳ ಬಗ್ಗೆ ದೂರುಗಳು ದಾಖಲಾಗುತ್ತಿವೆ ಎಂದು ಹೇಳಿದರು.
‘ಸರಕಾರವು ಯಾರನ್ನೂ ಬೆಂಬಲಿಸುವ ಅಥವಾ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆದರೆ, ಮೇಲ್ಕಂಡ ಪ್ರಕರಣಗಳ ಬಗ್ಗೆ ನಾವು ಖಂಡಿತವಾಗಿಯೂ ಸತ್ಯವನ್ನು ತಿಳಿಸಲು ಬಯಸುತ್ತೇವೆ. ಸರಣಿ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಅಗತ್ಯ ಸಾಕ್ಷಾಧ್ಯಾರಗಳು ಸಿಕ್ಕರೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರಿಗೆ, ಏನೇ ಇರಲಿ ಸತ್ಯವನ್ನು ತಿಳಿದುಕೊಳ್ಳುವಂತೆ ಸೂಚಿಸಲಾಗಿದೆ. ಸಾಕ್ಷಿ ಒದಗಿಸಿದ ಮಾಹಿತಿಯು ‘ಆಘಾತಕಾರಿ' ಯಾದದ್ದು. ಇದು ನಮ್ಮೆಲ್ಲರನ್ನೂ ಬೆಚ್ಚಿಬೀಳಿಸಿದೆ. ಸರಿಯಾದ ತನಿಖೆ ಖಂಡಿತವಾಗಿಯೂ ಅಗತ್ಯವಿದೆ. ಸಾಕ್ಷಿ ಹೇಳುತ್ತಿರುವುದು ನಿಜವಾಗಿದ್ದರೆ, ಅದು ಖಂಡಿತವಾಗಿಯೂ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಅವರು ಹೇಳಿದರು.







