ಪ್ರಧಾನಿ ಮೋದಿ ಸಂಪುಟದಲ್ಲಿ ತನಿಖೆ ಎದುರಿಸುತ್ತಿರುವವರನ್ನು ಕೈಬಿಡಲಿ : ಡಿ.ಕೆ.ಶಿವಕುಮಾರ್

ಬೆಂಗಳೂರು : ಪ್ರಧಾನಿ ಮೋದಿ ಅವರ ಸರಕಾರದ ಸಚಿವರುಗಳು ಅನೇಕ ಪ್ರಕರಣಗಳ ತನಿಖೆ ಎದುರಿಸುತ್ತಿದ್ದು, ಮೊದಲು ಅವರನ್ನು ಸಚಿವ ಸಂಪುಟದಿಂದ ಕೈಬಿಡಲಿ. ನಂತರ ನಮ್ಮ ಬಗ್ಗೆ ಚರ್ಚೆಗೆ ಬರಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರು ಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರ ವಿಚಾರ ಪ್ರಸ್ತಾಪ ಮಾಡುತ್ತಿದ್ದು, ಈ ವಿಚಾರದಲ್ಲಿ ಅವರು ರಾಜಕಾರಣ ಮಾಡುತ್ತಿದ್ದಾರೆ. ಮೊದಲು ಅವರ ಸಚಿವ ಸಂಪುಟದ ಕಡೆಗೆ ಕಣ್ಣಾಯಿಸಲಿ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷ ನಮ್ಮ ಮುಖ್ಯಮಂತ್ರಿಗಳ ಪರವಾಗಿ ನಿಲ್ಲಲಿದೆ. ಪಕ್ಷದ ಅಧ್ಯಕ್ಷನಾಗಿ ನಾನು ಈ ಮಾತು ಹೇಳುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್‍ನವರು ರಾಜಕೀಯವಾಗಿ ಷಡ್ಯಂತ್ರ ರೂಪಿಸುತ್ತಿದ್ದು, ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿರುವುದನ್ನು ಸಹಿಸಲು ವಿರೋಧ ಪಕ್ಷಗಳಿಂದ ಸಾಧ್ಯವಾಗುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.







