‘ಜಲಸಂಪನ್ಮೂಲ ಇಲಾಖೆ ಇಂಜಿನಿಯರ್ಗಳ ವರ್ಗಾವಣೆಗೆ ಆಕ್ಷೇಪ’; ಆದೇಶ ವಾಪಸ್ ಪಡೆಯುವಂತೆ ಮುಖ್ಯ ಕಾರ್ಯದರ್ಶಿಗೆ ಡಿಸಿಎಂ ಸೂಚನೆ

ಡಿ.ಕೆ.ಶಿವಕುಮಾರ್
ಬೆಂಗಳೂರು : ಜಲಸಂಪನ್ಮೂಲ ಇಲಾಖೆಗೆ ತನ್ನ ಪೂರ್ವಾನುಮತಿ ಪಡೆಯದೆ ಕೆಲವು ಮುಖ್ಯ ಇಂಜಿನಿಯರ್ಗಳನ್ನು ವರ್ಗಾವಣೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈ ಆದೇಶವನ್ನು ಕೂಡಲೇ ವಾಪಸ್ ಪಡೆಯುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸೂಚಿಸಿದ್ದಾರೆ.
ಪತ್ರದಲ್ಲಿ ಏನಿದೆ?: ನನ್ನ ಇಲಾಖೆಗಳಿಗೆ ಸಂಬಂಧಿಸಿದಂತೆ ವರ್ಗಾವಣೆ, ನೇಮಕಾತಿ ಮುಂತಾದ ವಿಚಾರಗಳ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಆದೇಶ ಹೊರಡಿಸಬೇಕಾದರೆ ನನ್ನ ಪೂರ್ವಾನುಮತಿಯನ್ನು ಪಡೆದ ನಂತರ ಆದೇಶ ಹೊರಡಿಸಬೇಕು ಎಂದು ಈ ಸರಕಾರ ಅಸ್ಥಿತ್ವಕ್ಕೆ ಬಂದ ಪ್ರಾರಂಭದಲ್ಲಿಯೆ ಟಿಪ್ಪಣಿ ಮೂಲಕ ನಿಮಗೆ ತಿಳಿಸಲಾಗಿತ್ತು ಎಂದು ಮುಖ್ಯ ಕಾರ್ಯದರ್ಶಿಗೆ ಅವರು ತಿಳಿಸಿದ್ದಾರೆ.
ನಂತರ, ಮುಖ್ಯ ಇಂಜಿನಿಯರ್ ಗಳ ಸೇವೆಗೆ ಸಂಬಂಧಿಸಿದ ಕಾರ್ಯವ್ಯಾಪ್ತಿಯನ್ನು ಜಲಸಂಪನ್ಮೂಲ ಇಲಾಖೆಯಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಹಿಸುವ ಕಡತದಲ್ಲಿಯೂ ಈ ಮೇಲ್ಕಂಡ ಸೂಚನೆಯನ್ನು ಪುನರ್ ಉಚ್ಚರಿಸಿ ಅಂತ ವಿಚಾರಗಳ ಬಗ್ಗೆ ನನ್ನ ಗಮನಕ್ಕೆ ತಂದು ನನ್ನ ಅನುಮೋದನೆಯನ್ನು ಪಡೆದ ನಂತರವೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಹೊರಡಿಸಬಹುದು ಎಂದು ಸ್ಪಷ್ಟವಾಗಿ ಸೂಚನೆಯನ್ನು ನೀಡಿದ್ದೇನೆ ಎಂದು ಶಿವಕುಮಾರ್ ಹೇಳಿದ್ದಾರೆ.
ಆದರೆ, ಇತ್ತೀಚೆಗೆ ಮೇ 9ರಂದು ನನ್ನ ಅನುಮೋದನೆ ಪಡೆಯದೆ ಕೆಲವು ಮುಖ್ಯ ಇಂಜಿನಿಯರ್ಗಳನ್ನು ಜಲ ಸಂಪನ್ಮೂಲ ಇಲಾಖೆಗೆ ವರ್ಗಾವಣೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ನನ್ನ ಸೂಚನೆಯನ್ನು ಕಡೆಗಣಿಸಿ ಆದೇಶ ಹೊರಡಿಸಿರುವುದಕ್ಕೆ ನಾನು ಆಕ್ಷೇಪಿಸುತ್ತೇನೆ. ಆದುದರಿಂದ, ಈ ಆದೇಶವನ್ನು ಕೂಡಲೆ ವಾಪಸ್ ಪಡೆದು ಇಂತಹ ವಿಚಾರಗಳ ಬಗ್ಗೆ ಯಾವುದೇ ಆದೇಶ ಹೊರಡಿಸಬೇಕಾದರೆ ನನ್ನ ಪೂರ್ವಾನುಮತಿಯನ್ನು ಪಡೆಯಬೇಕು ಎಂದು ಮತ್ತೊಮ್ಮೆ ಉಪ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡಲು ಇಂಜಿನಿಯರ್ಗಳು ಮುಂದೆ ಬರುತ್ತಿಲ್ಲ. ಅನೇಕ ಶಾಸಕರು ತಮಗೆ ಬೇಕಾದವರನ್ನು ಬೇರೆ ಇಲಾಖೆಗೆ ಕಳುಹಿಸಿಕೊಡಿ ಎಂದು ಒತ್ತಡ ಹಾಕುತ್ತಾರೆ. ಉನ್ನತ ಮಟ್ಟದಲ್ಲಿ ಆ ರೀತಿ ವರ್ಗಾವಣೆ ಮಾಡಲು ಅವಕಾಶವಿದೆ. ಆದುದರಿಂದ, ನನ್ನ ಗಮನಕ್ಕೆ ತರದೆ ಯಾರನ್ನೂ ವರ್ಗಾವಣೆ ಮಾಡದಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದೇನೆ.
ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ, ಅಧಿಕಾರ ಹಸ್ತಾಂತರದ ಘಳಿಗೆ ಹತ್ತಿರ ಬರುತ್ತಿದ್ದಂತೆ ವಿಸ್ಪೋಟವಾಗುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಕಾಣುತ್ತಿದ್ದು, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಮುಖ್ಯಮಂತ್ರಿಯ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರ ರಾಜ್ಯ ಕಾಂಗ್ರೆಸ್ ಸರಕಾರದ ಆಂತರಿಕ ಸಂಘರ್ಷಕ್ಕೆ ಪುಷ್ಟಿ ನೀಡಿದೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ, ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದಿಂದ ಕರ್ನಾಟಕದ ಅಭಿವೃದ್ಧಿ ಸೊರಗುತ್ತಿದೆ.
-ಆರ್.ಅಶೋಕ್, ವಿಪಕ್ಷ ನಾಯಕ







