ಹೇಮಾವತಿ ಲಿಂಕ್ ಕೆನಾಲ್ ಯೋಜನೆ | ಪ್ರತಿಭಟನಾನಿರತರ ಬ್ಲಾಕ್‍ಮೇಲ್, ಡಿಮ್ಯಾಂಡ್ ಬಗ್ಗೆ ಸಮಯ ಬಂದಾಗ ಬಹಿರಂಗಪಡಿಸುವೆ : ಡಿ.ಕೆ.ಶಿವಕುಮಾರ್

ಬೆಂಗಳೂರು: ಹೇಮಾವತಿ ಲಿಂಕ್ ಕೆನಾಲ್ ವಿರುದ್ಧ ಹೋರಾಟಗಾರರ ಬ್ಲಾಕ್ ಮೇಲ್, ಡಿಮ್ಯಾಂಡ್ ಏನೆಂಬುದನ್ನು ಸಮಯ ಬಂದಾಗ ಬಹಿರಂಗಪಡಿಸುವೆ. ಬೆಂಗಳೂರು ದಕ್ಷಿಣ ಜಿಲ್ಲೆಗೆ ನೀರು ಕೊಂಡೊಯ್ಯಲಾಗುತ್ತಿದೆ ಎಂಬುದು ಸುಳ್ಳು. ಕಳೆದ ಹತ್ತು ವರ್ಷದಲ್ಲಿ ಕುಣಿಗಲ್ ಪಾಲಿನ ನೀರಿನಲ್ಲಿ ಶೇ.90ರಷ್ಟು ಬಳಕಯಾಗದೆ ಅಲ್ಲಿನ ಜನರಿಗೆ ಅನ್ಯಾಯವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೇಮಾವತಿ ನೀರಿನ ಅಗತ್ಯವಿಲ್ಲ. ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿಸುತ್ತಿರುವುದು ಕೇವಲ ರಾಜಕಾರಣಕ್ಕಾಗಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಗೆ ಅನುಮೋದನೆ ನೀಡಲಾಯಿತು ಎಂದು ಹೇಳಿದರು.
ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸೇರಿ ಈ ಯೋಜನೆ ತಡೆ ಹಿಡಿದಿದ್ದರು. ಆರಂಭದಲ್ಲಿ ಈ ಯೋಜನೆ ವೆಚ್ಚ 600 ಕೋಟಿ ರೂ. ಇತ್ತು. ಈಗ ಅದು 900 ಯಿಂದ 1000 ಕೋಟಿ ರೂ.ಗೆ ಏರಿಕೆಯಾಗಿದೆ. ಈ ವಿಚಾರದಲ್ಲಿ ಬಿಜೆಪಿ ಶಾಸಕರಿಗೆ ಅಸೂಯೆ ಅಷ್ಟೇ ಎಂದು ಅವರು ಆರೋಪಿಸಿದರು.
ಕಳೆದ 10-12 ವರ್ಷಗಳಿಂದ ಕುಣಿಗಲ್ ತಾಲೂಕಿಗೆ ಅದರ ಪಾಲಿನ ನೀರು ತಲುಪಿಲ್ಲ. ಕುಣಿಗಲ್ ತಾಲೂಕಿನ ಜನರಿಗೆ ಶೇ.92ರಷ್ಟು ನೀರು ನಷ್ಟವಾಗಿದೆ. ಕಳೆದ 10 ವರ್ಷಗಳಲ್ಲಿ ಶೇ.10ರಷ್ಟು ನೀರು ಕೂಡ ಹೋಗಿಲ್ಲ. ಹೀಗಾಗಿ ನಾವು ಈ ಯೋಜನೆ ಕೈಗೊಂಡಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.
ಈ ಯೋಜನೆಯಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ಈ ನೀರನ್ನು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಗೆ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳುತ್ತಿದ್ದಾರೆ. ರಾಮನಗರಕ್ಕೆ ಇದರ ಅಗತ್ಯವಿಲ್ಲ. ಈ ಜಿಲ್ಲೆಗಾಗಿ ಪ್ರತ್ಯೇಕ ನೀರಾವರಿ ಯೋಜನೆ ರೂಪಿಸಲಾಗಿದೆ. ಹೀಗಾಗಿ ರಾಮನಗರಕ್ಕೆ ಸಾಕಷ್ಟು ನೀರಿದೆ ಎಂದು ಅವರು ಸ್ಪಷ್ಟಪಡಿಸಿದರು.
ತುಮಕೂರು ಜಿಲ್ಲೆಯ ಕೆಲವು ಭಾಗಗಳು ಕೃಷ್ಣಾ ವ್ಯಾಪ್ತಿಯಿಂದ ನೀರು ಪಡೆಯುತ್ತಿದೆ. ಕಾವೇರಿ, ಕೃಷ್ಣಾ ನದಿಗಳಿಂದ ತುಮಕೂರಿನ ಕೆಲವು ಭಾಗಗಳಿಗೆ ನೀರು ಪೂರೈಸಿಲ್ಲವೇ? ನಾನು ಸಚಿವನಾದ ಬಳಿಕ ಕಾವೇರಿಯಲ್ಲಿರುವ ಬಾಕಿ 6 ಟಿಎಂಸಿ ನೀರನ್ನು ಬೆಂಗಳೂರಿನ ಬಳಕೆಗೆ ಆದೇಶ ಹೊರಡಿಸಿದ್ದೇನೆ ಎಂದು ಶಿವಕುಮಾರ್ ಹೇಳಿದರು.
ಹೇಮಾವತಿ ನೀರಿನಲ್ಲಿ ಕುಣಿಗಲ್ ತಾಲೂಕಿಗೆ 3.3 ಟಿಎಂಸಿ ನೀರು ಪಾಲು ಸಿಕ್ಕಿದ್ದು, ನಾವಿಲ್ಲಿ ಅಂತರರಾಜ್ಯ ಸಂಘರ್ಷ ಮಾಡುತ್ತಿದ್ದೇವೆಯೇ? ಇಲ್ಲವಲ್ಲ. ಇದೇ ಕೃಷ್ಣಪ್ಪ ಹಾಗೂ ಸುರೇಶ್ ಗೌಡ ತಾಂತ್ರಿಕ ಸಮಿತಿ ರಚಿಸುವಂತೆ ಕೇಳಿದರು. ತಾಂತ್ರಿಕ ಸಮಿತಿ ರಚನೆಯಾಗಿ ಅದರ ವರದಿಯೂ ಬಂದಿದೆ. ಈಗ ರೈತರನ್ನು ಕರೆದುಕೊಂಡು ಹೋಗಿ ಅಡಚಣೆ ಮಾಡುತ್ತಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳಬೇಡಿ. ಈ ವಿಚಾರದಲ್ಲಿ ರಾಜಕಾರಣ ಬೇಡ. ನೀವು ಬಳಸಿರುವ ಶಬ್ದಗಳಿಗಿಂತ ಹೆಚ್ಚು ಶಬ್ದಗಳನ್ನು ಬಳಸುವ ಶಕ್ತಿ ಸಾಮರ್ಥ್ಯ ನನಗೂ ಇದೆ. ಸಮಯ ಬಂದಾಗ ಇದರ ಪರಿಣಾಮ ಗೊತ್ತಾಗುತ್ತದೆ ಎಂದು ಅವರು ಮಾರ್ಮಿಕವಾಗಿ ನುಡಿದರು.
ಕುಣಿಗಲ್ ಜನ ಬೇರೆಯವರ? ಅವರೂ ತುಮಕೂರಿನ ಭಾಗದವರಲ್ಲವಾ? ಮಾಗಡಿಯವರು ಬೇರೆಯವರಾ? ನಾವು ಎತ್ತಿನಹೊಳೆ ಯೋಜನೆಯಿಂದ ತುಮಕೂರಿನ ಹಲವು ಕೆರೆಗಳನ್ನು ತುಂಬಿಸುತ್ತಿಲ್ಲವೇ? ಈ ಯೋಜನೆ ಆರಂಭವಾಗಿದ್ದು ಕೇವಲ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಮಾತ್ರ ನೀರು ಪೂರೈಸಲು. ಆದರೆ ತುಮಕೂರಿಗೂ ನೀರು ನೀಡುತ್ತಿಲ್ಲವೇ? ಇದು ಜನರಿಗೆ ಅರ್ಥವಾಗುತ್ತದೆ. ಆದರೆ ಬ್ಲಾಕ್ ಮೇಲ್ ಮಾಡುವ ಹೋರಾಟಗಾರರಿಗೆ ಅರ್ಥ ಆಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ವ್ಯಂಗ್ಯವಾಡಿದರು.
ತುಮಕೂರಿಗೆ ಹೇಮಾವತಿ ನೀರು ತರಲು ಕುಣಿಗಲ್ ನ ವೈ.ಕೆ.ರಾಮಯ್ಯ, ಹುಚ್ಚಮಾಸ್ತೀಗೌಡ ಹೋರಾಟ ಮಾಡಿದ್ದಾರೆ. ನಾವು ಅದನ್ನು ಜಾರಿ ಮಾಡುತ್ತಿದ್ದೇವೆ. ಈ ಯೋಜನೆಗೆ ಈಗಾಗಲೇ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಆರಂಭವಾಗಿದೆ ಎಂದು ಅವರು ತಿಳಿಸಿದರು.
ಕಾನೂನು ಕೈಗೆತ್ತಿಕೊಂಡರೆ ಕಾನೂನು ಕ್ರಮ: ಕಾನೂನನ್ನು ಕೈಗೆತ್ತಿಕೊಳ್ಳುವವರು ಯಾರೇ ಆದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಕಾನೂನು ಕೈಗೆತ್ತಿಕೊಂಡು ಸರಕಾರವನ್ನು ಬೆದರಿಸಲು ಸಾಧ್ಯವಿಲ್ಲ. ಅವರ ಬೇಡಿಕೆಗಳನ್ನು ನಾನು ಬಹಿರಂಗಪಡಿಸಲು ಬಯಸುವುದಿಲ್ಲ. ನನಗೆ ಎಲ್ಲವೂ ಗೊತ್ತಿದೆ. ಅನಗತ್ಯವಾಗಿ ಸ್ವಾಮೀಜಿಗಳನ್ನು ಕರೆತರುತ್ತಿರುವುದೇಕೆ? ಅವರಿಗೂ ಇದಕ್ಕೆ ಏನು ಸಂಬಂಧ? ಎಂದು ಶಿವಕುಮಾರ್ ಪ್ರಶ್ನಿಸಿದರು.
ಮೇಕೆದಾಟು ಪಾದಯಾತ್ರೆ ಮಾಡುವಾಗ ನಾನು ಕಾನೂನು ಕೈಗೆತ್ತಿಕೊಂಡೆನಾ? ಕೃಷ್ಣಾ ಹೋರಾಟದಲ್ಲಿ ಕಾನೂನು ಕೈಗೆತ್ತಿಕೊಂಡರೆ? ಪ್ರತಿ ನಿತ್ಯ ಕಾಮಗಾರಿ ನಿಲ್ಲಿಸಿದರೆ ಅದರ ನಷ್ಟ ಭರಿಸುವವರು ಯಾರು? ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.
ಅಸೂಯೆಯಿಂದ ಗ್ಯಾರಂಟಿ ಬಗ್ಗೆ ಟೀಕೆ: ಗ್ಯಾರಂಟಿ ಫಲಾನುಭವಿಗಳಿಗಿಂತ ಅನುಷ್ಠಾನ ಸಮಿತಿ ಸದಸ್ಯರಿಗೆ ಹಣ ಹೋಗುತ್ತಿದೆ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ರಾಜ್ಯಪಾಲರು, ವಿವಿಧ ಆಯೋಗಗಳ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ನೇಮಕ ಮಾಡುತ್ತಾರೆ? ಆಡಳಿತ ಪಕ್ಷದ ಮುಖಂಡರನ್ನಲ್ಲವೇ? ನಮಗೆ ಅಧಿಕಾರಕ್ಕೆ ಕೊಟ್ಟ ಕಾರ್ಯಕರ್ತರಿಗೆ ನಾವು ಶಕ್ತಿ ನೀಡಿದ್ದೇವೆ. ಇದು ನಮ್ಮ ರಾಜಕೀಯ ಇಚ್ಚಾಶಕ್ತಿ. ಇದು ನಮ್ಮ ಹಕ್ಕು, ನಾವು ನೇಮಕ ಮಾಡಿದ್ದೇವೆ. ನಾವು ಈ ಯೋಜನೆಗೆ ಅನುದಾನ ಮೀಸಲಿಟ್ಟಿದ್ದು ಅದನ್ನು ಜಾರಿ ಮಾಡುತ್ತೇವೆ. ನಮ್ಮ ಯೋಜನೆಗಳಿಂದ ಅಸೂಯೆಗೊಂಡು ಈ ರೀತಿ ಟೀಕೆ ಮಾಡಿತ್ತಿದ್ದಾರೆ ಎಂದು ತಿಳಿಸಿದರು.







