ಮತ್ತೆ ಮುನ್ನೆಲೆ ಬಂದ ಸಿಎಂ ಕುರ್ಚಿ ಸಮರ: ಸಿದ್ದರಾಮಯ್ಯ ಎದುರೇ ಸಿಎಂ ಆಸೆ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಬೆಂಗಳೂರು: ಕೊಂಚಮಟ್ಟಿಗೆ ತಣ್ಣಗಾಗಿದ್ದ ಸಿಎಂ ಕುರ್ಚಿ ಶೀತಲ ಸಮರ ಇದೀಗ ಪುನಃ ಮುನ್ನೆಲೆಗೆ ಬಂದಿದ್ದು, ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರ ಎದುರೇ ಮುಖ್ಯಮಂತ್ರಿಯಾಗುವ ಆಸೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ.
ಬುಧವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಪಿಟಿಸಿಎಲ್ ನೌಕರರ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಭಾಷಣ ಮಾಡಲು ಬಂದ ಕೂಡಲೇ ವಿದ್ಯುತ್ ಇಲಾಖೆ ಸಿಬ್ಬಂದಿಗಳು, ನೌಕರರು ಡಿಕೆ, ಡಿಕೆ ಎಂದು ಘೋಷಣೆ ಕೂಗಲಾರಂಭಿಸಿದರು.
ಈ ವೇಳೆ ಮಾತು ಆರಂಭಿಸಿದ ಡಿ.ಕೆ.ಶಿವಕುಮಾರ್, ಸುಮ್ಮನೆ ಎಲ್ಲರೂ ಡಿಕೆ ಡಿಕೆ ಅನ್ನುವುದಲ್ಲ, ಮುಂದೆ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರವನ್ನು ನೀವು ಮತ್ತೆ ಅಧಿಕಾರಕ್ಕೆ ತರಬೇಕು, ಶಕ್ತಿ ತುಂಬಬೇಕು ಎಂದು ಮನವಿ ಮಾಡುವ ಮೂಲಕ ಸಿಎಂ ಸ್ಥಾನಕ್ಕಾಗಿ ಪರೋಕ್ಷವಾಗಿ ಸಂದೇಶ ಕಳುಹಿಸಿದರು.
ನಾವು ನಿಮ್ಮ ಪರವಾಗಿ ಕೆಲಸ ಮಾಡಿದ್ದೇವೆ. ನೀವು ನಮ್ಮ ಉಪಕಾರವನ್ನು ಸ್ಮರಣೆ ಮಾಡಬೇಕು. ಇಲ್ಲಿಗೆ ಬಂದು ಜ್ಯೋತಿ ಬೆಳಗಿಸಿ ಹೋಗುವುದಲ್ಲ. ಮುಂದೆ ಡಿಕೆಯನ್ನು ಮತ್ತೆ ಅಧಿಕಾರಕ್ಕೆ ತರಬೇಕು, ಡಿಕೆ ಸರಕಾರ ತರಬೇಕು ಎಂದು ಡಿ.ಕೆ.ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಮುಂದೆಯೇ ಹೇಳಿದರು.







