ಕುಮಾರಸ್ವಾಮಿ ಸರಕಾರ ಬರುವುದು ಇಲ್ಲ, ಗೆಲ್ಲುವುದೂ ಇಲ್ಲ: ಡಿ.ಕೆ.ಶಿವಕುಮಾರ್ ತಿರುಗೇಟು

ಡಿ.ಕೆ.ಶಿವಕುಮಾರ್
ಬೆಂಗಳೂರು: “ಕುಮಾಸ್ವಾಮಿ ಅವರ ಸರಕಾರ ಅಧಿಕಾರಕ್ಕೆ ಬರುತ್ತದೆಯೇ? ಅವರ ಸರಕಾರ ಬರುವುದೂ ಇಲ್ಲ, ಗೆಲ್ಲುವುದೂ ಇಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.
ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಡಿ.ಕೆ.ಶಿವಕುಮಾರ್ ಬಳಿ ಬಟ್ಟೆ ಹೊಲಿಸಿಕೊಳ್ಳುವಷ್ಟು ದರಿದ್ರ ನನಗಿಲ್ಲ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ ಹೀಗೆ ಉತ್ತರಿಸಿದರು.
“ಕುಮಾರಸ್ವಾಮಿ ಅವರು ಏನು ಹೇಳಿದ್ದರು? ಬಿಜೆಪಿ- ಜೆಡಿಎಸ್ ಮೈತ್ರಿ ಸರಕಾರ ಬರುತ್ತದೆ, ಎಲ್ಲ ತಯಾರಾಗಿ ಎಂದು ಹೇಳಿದ್ದರು. ಆಗ ಅದಕ್ಕೆ ನಾನು ಉಡುಗೊರೆ ನೀಡುತ್ತೇನೆ ಎಂದು ಹೇಳಿದ್ದೆ” ಎಂದು ವ್ಯಂಗ್ಯವಾಡಿದರು.
ಯಾರ ಅವಕಾಶವನ್ನು ನಾವು ಕಿತ್ತುಕೊಂಡಿಲ್ಲ :
“ಗ್ರಾಮೀಣ ಭಾಗದಲ್ಲಿ ಅಲ್ಪಸಂಖ್ಯಾತ ಫಲಾನುಭವಿಗಳು ಕಡಿಮೆ ಇರುವ ಕಾರಣಕ್ಕೆ ವಸತಿ ಸಚಿವರು ಮನೆ ಹಂಚಿಕೆ ಮೀಸಲಾತಿಯನ್ನು ನಗರ ಪ್ರದೇಶಕ್ಕೆ ವರ್ಗಾವಣೆ ಮಾಡಿದ್ದಾರೆ. ನಾವು ಯಾರ ಸೌಲಭ್ಯಗಳನ್ನು ಕಿತ್ತು ಅಲ್ಪಸಂಖ್ಯಾತರಿಗೆ ನೀಡುತ್ತಿಲ್ಲ” ಎಂದು ಡಿಸಿಎಂ ಸ್ಪಷ್ಟನೆ ನೀಡಿದರು.
“ಸಾಚಾರ್ ವರದಿಗೆ ಅನುಗುಣವಾಗಿ ಗ್ರಾಮೀಣ ಪ್ರದೇಶಕ್ಕೂ ಶೇ.10ರಷ್ಟು ಮೀಸಲಾತಿ ನೀಡಲಾಗುತ್ತಿತು. ಆದರೆ ಗ್ರಾಮೀಣ ಭಾಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಇರುವ ಕಾರಣಕ್ಕೆ ಸೌಲಭ್ಯ ರದ್ದಾಗುತ್ತಿತ್ತು. ನಾವೇನೂ ಹೊಸದಾಗಿ ಮೀಸಲಾತಿ ಸೃಷ್ಟಿ ಮಾಡಿ ನೀಡುತ್ತಿಲ್ಲ. ಪರಿಶಿಷ್ಟ ವರ್ಗ ಮತ್ತು ಜಾತಿಗಳಲ್ಲಿ ಶೇ.90ರಷ್ಟು ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಹೊಸದಾಗಿ ಮನೆ ಬೇಕಾಗಿರುವವರು ಅಡಿಪಾಯ ಹಾಕಿದರೆ ಮಾತ್ರ ಅವರಿಗೆ ಅನುಕೂಲ ಮಾಡಲು ಸಾಧ್ಯ. ಅಡಿಪಾಯ ಹಾಕದೆ ಹಣ ನೀಡಲು ಸಾಧ್ಯವಿಲ್ಲ” ಎಂದರು.
ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಹಣ ಕೊಟ್ಟರೇ ಮಾತ್ರ ಮನೆ ಹಂಚಿಕೆ ಎನ್ನುವ ಶಾಸಕ ಬಿ.ಆರ್. ಪಾಟೀಲ್ ಅವರ ಆರೋಪದ ಬಗ್ಗೆ ಕೇಳಿದಾಗ, “ಇದರ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ಹೇಳಿದರು.







