ಸಣ್ಣ ಕೈಗಾರಿಕೆಗಳಿಗಾಗಿ ಪ್ರತ್ಯೇಕ ಸಚಿವಾಲಯಕ್ಕೆ ಸಿದ್ಧತೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ಸಣ್ಣ ಕೈಗಾರಿಕೆಗಳಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದು, ನಾವು ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶನಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ನಡೆದ ಕಾಸಿಯಾ ಶ್ರೇಷ್ಠತಾ ಮತ್ತು ನಾವೀನ್ಯತಾ ಕೇಂದ್ರ ಮತ್ತು ವಸ್ತು ಪ್ರದರ್ಶನಾ ಕೇಂದ್ರ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಐಎಡಿಬಿ ವತಿಯಿಂದ ಶೇ.20ರಷ್ಟು ಅನುದಾನ ಸಣ್ಣ ಕೈಗಾರಿಕೆಗಳಿಗೆ ನೀಡಬೇಕು ಎಂಬ ಕಾನೂನಿದೆ. ಈ ವಿಚಾರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಬಳಿ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇನೆ. ಸಣ್ಣ ಕೈಗಾರಿಕೆಗಳಿಗೆ ನಾವು ಒತ್ತು ನೀಡಬೇಕು ಎಂದು ಅವರು ತಿಳಿಸಿದರು.
‘ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು’. ನೀವೆಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಕಾಸಿಯಾ ಸಂಸ್ಥೆ ಮುಂದಿನ ಪೀಳಿಗೆಗೆ ಕೌಶಲ್ಯಾಭಿವೃದ್ಧಿ ಕೆಲಸವನ್ನು ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಮಾಡದ ಕೆಲಸವನ್ನು ಕಾಸಿಯಾ ಸಂಸ್ಥೆ ಮಾಡುತ್ತಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಿವಕುಮಾರ್ ಹೇಳಿದರು.
ನಿಮ್ಮ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತದೆ: ನನಗೆ ಸಣ್ಣ ಕೈಗಾರಿಕಾ ವಲಯದ ಪರಿಸ್ಥಿತಿಯ ಬಗ್ಗೆ ಅರಿವಿದೆ. ಈ ವಲಯ ಎಷ್ಟು ಉದ್ಯೋಗ ಸೃಷ್ಟಿಸುತ್ತದೆ, ಎಷ್ಟು ಶ್ರಮಿಸುತ್ತದೆ ಎಂದು ನಾನು ನೋಡಿದ್ದೇನೆ. ನೀವು ಬೃಹತ್ ಕೈಗಾರಿಕೆಗಳಿಗಿಂತ ಹೆಚ್ಚು ಒತ್ತಡವನ್ನು ಸರಕಾರಗಳ ಮೇಲೆ ಹಾಕಬೇಕು. ಆಗ ಮಾತ್ರ ನಿಮಗೆ ಹೆಚ್ಚು ಯಶಸ್ಸು ಸಿಗಲು ಸಾಧ್ಯ ಎಂದು ಅವರು ಹೇಳಿದರು.
ಕೇಂದ್ರ ಸರಕಾರ ದೊಡ್ಡ ಯೋಜನೆ ಘೋಷಣೆ ಮಾಡುತ್ತದೆ. ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ ನೀಡಬೇಕು ಎಂದು ಹೇಳುತ್ತದೆ. ಆದರೆ ಬ್ಯಾಂಕಿನವರು ನಿಮಗೆ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಹಳೇ ಉದ್ಯಮಿಗಳಿಗೆ ಸಹಕಾರ ನೀಡುವಂತೆ ಹೊಸಬರಿಗೆ ಸಹಕಾರ ನೀಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಇತ್ತೀಚೆಗೆ ನೀವು ನಿಮ್ಮ ಕಾರ್ಮಿಕರ ಸಮಸ್ಯೆ ಬಗ್ಗೆ ನನ್ನ ಬಳಿ ಚರ್ಚೆ ಮಾಡಿದ್ದೀರಿ. ನಾನು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿ ಕಾರ್ಮಿಕ ಸಚಿವರಿಗೆ ಅಗತ್ಯ ಸೂಚನೆ ನೀಡಿದ್ದೇವೆ. ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಶಕ್ತಿ ತುಂಬಬೇಕಿದೆ. ನಮ್ಮ ನೀತಿಗಳು ಕೈಗಾರಿಕೆಗಳಿಗೆ ಉದಾರವಾಗಿರಬೇಕು, ಆಕರ್ಷಣೀಯವಾಗಿರಬೇಕು. ಬೇರೆ ರಾಜ್ಯಗಳಲ್ಲಿ ಹೆಚ್ಚು ಆಕರ್ಷಕವಾದ ನೀತಿ ರೂಪಿಸುತ್ತಾರೆ. ಆದರೆ ಅಲ್ಲಿ ಗುಣಮಟ್ಟದ ಮಾನವ ಸಂಪನ್ಮೂಲಗಳಿಲ್ಲ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕೇಂದ್ರದಲ್ಲಿ ನಾನು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವನಿದ್ದಾಗ ಅಂದು ಭಾರತದಾದ್ಯಂತ 20 ತಂತ್ರಜ್ಞಾನದ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಯಿತು. ಅವುಗಳಿಂದ ಹೆಚ್ಚಿನ ಕೈಗಾರಿಕೆಗಳ ಸ್ಥಾಪನೆಗೆ ಸಹಕಾರಿಯಾಯಿತು. ದೇವನಹಳ್ಳಿಯ ಏರೋಸ್ಪೇಸ್ ಸೆಂಟರ್ ಅನ್ನು ಮಂಜೂರು ಮಾಡಿ ಅಲ್ಲಿ ಅನುಕೂಲವಾಗುವ ರೀತಿಯಲ್ಲಿ ಜಾರಿಗೊಳಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಎನ್.ಶ್ರೀನಿವಾಸ್, ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್.ಸಾಗರ್, ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಮತ್ತಿತರರು ಉಪಸ್ಥಿತರಿದ್ದರು.
ಪವರ್ ಶೇರಿಂಗ್ ವಿಚಾರ ಚರ್ಚೆ ಇಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಧ್ಯರಾತ್ರಿ ತಮ್ಮನ್ನು ಭೇಟಿಯಾದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅವರು ಬಂದು ಭೇಟಿ ಮಾಡಿದ್ದು ನಿಜ, ಆದರೆ ಬೇರೆ ವಿಚಾರ ಚರ್ಚೆ ಮಾಡಿದೆವು. ಇಲ್ಲಿ ಪವರ್ ಶೇರಿಂಗ್ ವಿಚಾರ ಚರ್ಚೆ ಇಲ್ಲ. ನಾವೆಲ್ಲರೂ ಸೇರಿ ಒಟ್ಟಾಗಿ ಶಿಸ್ತಿನಿಂದ ಕೆಲಸ ಮಾಡಬೇಕು. ಇದರ ಹೊರತಾಗಿ ಬೇರೆ ಯಾವುದೇ ವಿಚಾರವಿಲ್ಲ ಎಂದು ಹೇಳಿದರು.







