ಸಾಧನಾ ಸಮಾವೇಶದಲ್ಲಿ ನನಗೆ ಅವಮಾನ ಮಾಡಲಾಗಿದೆ ಎಂಬುದು ಸುಳ್ಳು: ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಬೆಂಗಳೂರು : ‘ಬಿಜೆಪಿಯ ಮುಖಂಡರಿಗೆ ಯಾವಾಗಲೂ ನನ್ನ ಮೇಲೆ ಪ್ರೀತಿ ಜಾಸ್ತಿ. ನಾನು ಹೆಚ್ಚು ಬಲಿಷ್ಠವಾಗಿರುವುದಕ್ಕೆ ನನ್ನ ಮೇಲೆ ಅವರಿಗೆ ಮಮಕಾರ. ಹೀಗಾಗಿ ಅವರು ನನ್ನನ್ನು ಸದಾ ನೆನಪಿಸಿಕೊಳ್ಳುತ್ತಿರುತ್ತಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮೈಸೂರಿನಲ್ಲಿ ನಿನ್ನೆ ನಡೆದ ಸಾಧನಾ ಸಮಾವೇಶದಲ್ಲಿ ನನಗೆ ಅವಮಾನ ಮಾಡಲಾಗಿದೆ ಎಂಬುದು ಸುಳ್ಳು. ನನ್ನ ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಹಿತಿ ನೀಡಿಯೇ ನಾನು ಕಾರ್ಯಕ್ರಮದಿಂದ ನಿರ್ಗಮಿಸಿದ್ದು. ಇದರ ಹೊರತಾಗಿ ಯಾವುದೇ ರಾಜಕಾರಣವಿಲ್ಲ ಎಂದು ಸ್ಪಷ್ಟಣೆ ನೀಡಿದರು.
ಚಾಮುಂಡೇಶ್ವರಿ ಕೃಪೆ: ನಾನು ಮೈಸೂರಿನಿಂದ ಹಿಂದಿರುಗುವ ವೇಳೆ ಮಾರ್ಗಮಧ್ಯ ನನ್ನ ಬೆಂಗಾವಲು ವಾಹನ ಅಪಘಾತಕ್ಕೀಡಾಯಿತು. ತಾಯಿ ಚಾಮುಂಡೇಶ್ವರಿ ಕೃಪೆ ಯಾರಿಗೂ ಅಪಾಯವಾಗಿಲ್ಲ. ವಕೀಲರ ಜೊತೆ ಸಭೆ ನಿಗದಿಯಾದ ಕಾರಣ, ನಾನು ದಿಲ್ಲಿಗೆ 7.30ಕ್ಕೆ ತೆರಳಿ, 9.30ಕ್ಕೆ ವಾಪಸ್ ಬಂದಿದ್ದೇನೆ. ನಂತರ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ವಿವರಣೆ ನೀಡಿದರು.
ಅಪಮಾನ ಮಾಡಿಲ್ಲ: ‘ಮೈಸೂರಿನಲ್ಲಿ ನಡೆದ ಸಾಧನ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾವುದೇ ರೀತಿಯ ಅಪಮಾನ ಮಾಡಿಲ್ಲ. ಬಿಜೆಪಿ ಈ ವಿಚಾರವನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬಿಜೆಪಿಯವರು ನನ್ನ ಹಾಗೂ ಡಿ.ಕೆ.ಶಿ ನಡುವೆ ಒಡಕು ಮೂಡಿಸಿ, ರಾಜಕೀಯ ಲಾಭ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದು ಯಶಸ್ವಿಯಾಗುವುದಿಲ್ಲ’
-ಸಿದ್ದರಾಮಯ್ಯ, ಮುಖ್ಯಮಂತ್ರಿ







