ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸಲು ಆದ್ಯತೆ: ಡಿ.ಕೆ.ಶಿವಕುಮಾರ್
‘ಕುಂದಾಪ್ರ ಕನ್ನಡ ಹಬ್ಬ-2025’ರ ಸಮಾರೋಪ ಸಮಾರಂಭ

ಬೆಂಗಳೂರು : ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸುವುದಕ್ಕೆ ಆದ್ಯತೆ ನೀಡಿ, ಬಳಿಕ ಆ ಪ್ರದೇಶಕ್ಕೆ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಕುಂದಾಪ್ರ ಕನ್ನಡ ಪ್ರತಿಷ್ಠಾನದ ವತಿಯಿಂದ ನಗರದ ನಂದಿ ಲಿಂಕ್ ಗೌಂಡ್‍ನಲ್ಲಿ ಆಯೋಜಿಸಿದ್ದ 2 ದಿನಗಳ ‘ಕುಂದಾಪ್ರ ಕನ್ನಡ ಹಬ್ಬ-2025’ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕುಂದಾಪುರಕ್ಕೆ ಒಂದು ಸುಸಜ್ಜಿತ ಕುಂದಾಪ್ರ ಭವನ, ಒಂದು ವೈದ್ಯಕೀಯ ಕಾಲೇಜು ಹಾಗೂ ಕುಂದಾಪ್ರ ಸಮೀಪದ ಬೈಂದೂರಿನಲ್ಲಿ ಒಂದು ವಿಮಾನ ನಿಲ್ದಾಣ ಆಗಬೇಕು' ಎಂದು 'ಕುಂದಾಪುರ ಕನ್ನಡ ಪ್ರತಿಷ್ಠಾನ' ಸರಕಾರಕ್ಕೆ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕರಾವಳಿಗೆ ಪ್ರತ್ಯೇಕ ಪ್ರವಾಸ ನೀತಿ ರೂಪಿಸುವ ಚಿಂತನೆ ಸರಕಾರಕ್ಕಿದೆ, ಈ ನೀತಿ ಜಾರಿಯಾದ ಬಳಿಕ ವಿಮಾನ ನಿಲ್ದಾಣದ ಬಗ್ಗೆ ಚಿಂತಿಸೋಣ. ಅದಕ್ಕೂ ಮೊದಲು ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸಲಾಗುವುದು ಎಂದು ತಿಳಿಸಿದರು.
ಕರಾವಳಿ ಪ್ರದೇಶದಿಂದ ಜನರು ವಲಸೆ ಹೋಗುವುದನ್ನು ತಡೆಯಲು ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕಿದೆ. ಅಲ್ಲಿನ ಪರಂಪರೆ, ಇತಿಹಾಸವನ್ನು ದೇಶಕ್ಕೆ ಪರಿಚಯಿಸಬೇಕು. ಅದಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ತಿಳಿಸಿದರು.
ಬಿಬಿಎಂಪಿ(ಗ್ರೇಟರ್ ಬೆಂಗಳೂರು) ಐದು ಭಾಗ ಮಾಡಿದಾಗ ಕೆಲವರು ಆಕ್ಷೇಪಿಸಿದ್ದರು, ಆದರೆ ಇದು ಕರ್ನಾಟಕದ ಹೃದಯ ಭಾಗ. ದಕ್ಷಿಣಕನ್ನಡ, ಉಡುಪಿ ಸೇರಿ ಎಲ್ಲ ಭಾಗದ ಜನರ ಕೇಂದ್ರ ಸ್ಥಳವಿದು, ಹೊರಗಡೆಯವರು ಅನ್ನೋ ಭಯ ಯಾರಿಗೂ ಬೇಡ. ಎಲ್ಲಕ್ಕಿಂತ ಹೆಚ್ಚು ಉಡುಪಿ-ಕುಂದಾಪುರದ ಜನತೆ ಜೊತೆ ಇದ್ದೇನೆ ಎಂಬ ಮಾತು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಊರ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ನಟಿ ರಕ್ಷಿತಾ ಪ್ರೇಮ್, ಪತ್ರಕರ್ತ ಜೋಗಿ, ಯುನಿವರ್ಸಲ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಟ್‍ನ ಉಪೇಂದ್ರ ಶೆಟ್ಟಿ, ಚಿತ್ರನಟ ಶೈನ್ ಶೆಟ್ಟಿ, ಲೈಫ್‍ಲೈನ್ ಟೆಂಡರ್ ಚಿಕನ್ ಮ್ಯಾನೇಜಿಂಗ್ ಡೈರೆಕ್ಟರ್ ಕಿಶೋರ್ ಹೆಗ್ಡೆ, ವಿಎಲ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅಂಜಲಿ ವಿಜಯ್, ಎಎಸ್ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ಶೆಟ್ಟಿ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಬಾರ್ಕೂರು, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಜೊತೆ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ ಮತ್ತಿತರರು ಉಪಸ್ಥಿತರಿದ್ದರು.







