ಕೆ.ಎನ್.ರಾಜಣ್ಣ ವಜಾ ನನಗೂ ನೋವಾಗಿದೆ, ಇದು ಪಕ್ಷದ ತೀರ್ಮಾನ : ಡಿ.ಕೆ.ಶಿವಕುಮಾರ್

ಬೆಂಗಳೂರು, ಆ.11: ‘ನನಗೆ ತಿಳಿದಿರುವಂತೆ ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ಅವರ ವಜಾ ಪಕ್ಷದ ತೀರ್ಮಾನ. ಇದರ ಹೊರತಾಗಿ ಬೇರೆ ವಿಚಾರ ನನಗೆ ತಿಳಿದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಕೇಳಿದೆ. ಅವರು ತಮಗೆ ಬಂದ ಮಾಹಿತಿ ನೀಡಿದ್ದಾರೆ. ನನಗೆ ಬೇರೆ ಯಾವುದೇ ವಿಚಾರ ಗೊತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆ.ಎನ್.ರಾಜಣ್ಣ ಅವರನ್ನು ವಜಾ ಮಾಡಿದ್ದರಿಂದ ನನಗೂ ನೋವಾಗಿದೆ. ರಾಜಣ್ಣ ಅವರು ನನ್ನ ಒಳ್ಳೆಯ ಸ್ನೇಹಿತರು, ಆಪ್ತರು. 25 ವರ್ಷಗಳಿಂದ ಜೊತೆಯಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದರು.
‘ಶಾಸಕರು ಮತ್ತು ಮಂತ್ರಿಗಳು ನನ್ನ ಕಾರ್ಯವ್ಯಾಪ್ತಿಗೆ ಬರುವುದಿಲ್ಲ. ಶಾಸಕರಾದ ನಂತರ ಪಕ್ಷಕ್ಕೆ ಸಂಬಂಧಪಟ್ಟಂತೆ ಅಶಿಸ್ತು ತೋರಿದರೆ ಸಣ್ಣ-ಪುಟ್ಟ ನೋಟಿಸ್ ನೀಡುವ ಕೆಲಸ ಮಾಡಲಾಗುತ್ತದೆ. ಇದರ ಹೊರತಾಗಿ ಶಾಸಕಾಂಗ ಪಕ್ಷದ ನಾಯಕರೇ (ಸಿಎಲ್‍ಪಿ) ಮಂತ್ರಿಗಳು ಹಾಗೂ ಶಾಸಕರ ಮೇಲೆ ನಿಯಂತ್ರಣ ಹೊಂದಿರುತ್ತಾರೆ ಎಂದು ಶಿವಕುಮಾರ್ ಸ್ಪಷ್ಟಣೆ ನೀಡಿದರು.
ಯಾವ ಕಾರಣಕ್ಕೆ ರಾಜಣ್ಣ ಅವರನ್ನು ವಜಾ ಮಾಡಲಾಯಿತು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಏನೂ ಮಾಡಲು ಆಗುವುದಿಲ್ಲ. ಇದು ಪಕ್ಷದ ತೀರ್ಮಾನ. ಸಚಿವ ರಾಜಣ್ಣ ಅವರಿಗೆ ಅವಮಾನ ಆಗಿರುವ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಶಿವಕುಮಾರ್ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.







