ಗುತ್ತಿಗೆದಾರರಿಗೆ ಜೇಷ್ಟತೆ ಆಧಾರದಲ್ಲಿ ಬಿಲ್ ಪಾವತಿ : ಡಿ.ಕೆ.ಶಿವಕುಮಾರ್

ಬೆಂಗಳೂರು, ಸೆ. 8: ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ಮೊದಲು ಬಿಬಿಎಂಪಿಯಲ್ಲಿ ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿ ಪೂರ್ಣಗೊಂಡಿರುವ ಎಲ್ಲ ಕಾಮಗಾರಿಗಳ ಬಿಲ್ ಅನ್ನು ಜೇಷ್ಟತೆ ಆಧಾರದಲ್ಲಿ ಪಾವತಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಗುತ್ತಿಗೆದಾರರಿಗೆ ಭರವಸೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‘ಗುತ್ತಿಗೆದಾರರ 50 ಲಕ್ಷ ರೂ.ವರೆಗೆ ಬಿಲ್ ಪಾವತಿಗೆ ಕೂಡಲೇ ಆದೇಶ ಮಾಡಲಾಗುವುದು. ಎಲ್‍ಸಿ, ಠೇವಣಿ, ಭದ್ರತೆ ಹಣ ಬಿಡುಗಡೆ ಸೂಚಿಸುತ್ತೇನೆ. ಬಾಕಿಯಿರುವ ಬಿಲ್ ಪಾವತಿಯನ್ನು ಜೇಷ್ಠತೆ ಆಧಾರದಲ್ಲೇ ಮಾಡಬೇಕು ಎಂದು ಸೂಚಿಸಿದರು.
ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಬಿಲ್ ಪಾವತಿ 2 ವರ್ಷಗಳಿಂದ ಬಾಕಿ ಉಳಿದಿದೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್ ಐಡಿಎಲ್) ಮೂಲಕ ಮುಗಿದಿರುವ ಕಾಮಗಾರಿಗಳಿಗೆ ಐದಾರು ವರ್ಷದಿಂದ ಬಿಲ್ ಬಾಕಿ ಉಳಿದಿದ್ದು, ಕೂಡಲೇ ಬಿಡುಗಡೆ ಮಾಡಬೇಕು' ಎಂದು ಗುತ್ತಿಗೆದಾರರು ಕೋರಿದ್ದಾರೆ ಎಂದರು.
ಬಿಬಿಎಂಪಿಯಿದ್ದಾಗ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ (ಜಿಬಿಎ) 750 ಕೋಟಿ ರೂ.ಹಣ ಬಿಡುಗಡೆ ಮಾಡಲಾಗುತ್ತದೆ. ಒಂದು ತಿಂಗಳಲ್ಲಿ ಎಲ್ಲ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಈ ವೇಳೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್, ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಂದಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.







