ಹಿಂದಿನ ಬಿಜೆಪಿ ಸರಕಾರದಿಂದಾಗಿ ಗುತ್ತಿಗೆದಾರರ ಬಾಕಿ ಪಾವತಿ ಸಮಸ್ಯೆ : ಡಿ.ಕೆ.ಶಿವಕುಮಾರ್

ಬೆಂಗಳೂರು, ಅ.18: ಗುತ್ತಿಗೆದಾರರ ಗಡುವು ನನಗೆ ಬರುವುದಿಲ್ಲ. ನಾನು ಅವರ ಸಂಘದ ಸಭೆ ಕರೆದಿದ್ದು, ಅವರೊಂದಿಗೆ ಮಾತನಾಡುತ್ತೇನೆ. ನಾನು ಬೆದರಿಕೆಗಳಿಗೆ ಹೆದರುವುದಿಲ್ಲ. ಬಿಜೆಪಿ ಸರಕಾರದಲ್ಲಿ ರಾಜ್ಯದ ಬಜೆಟ್ ಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರು. ಹೀಗಾಗಿ ಈ ಸಮಸ್ಯೆ ಉದ್ಭವಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಶನಿವಾರ ನಗರದ ಕೆ.ಆರ್.ಪುರದ ಟಿ.ಸಿ.ಪಾಳ್ಯದ ವೆಂಗಯ್ಯನ ಕೆರೆ ಇಕೋ ಪಾರ್ಕ್‍ನಲ್ಲಿ ಹಮ್ಮಿಕೊಂಡಿದ್ದ ‘ಬೆಂಗಳೂರು ನಡಿಗೆ’ ಅಭಿಯಾನದ ಅಂಗವಾಗಿ ‘ನಾಗರಿಕರೊಂದಿಗೆ ಸಂವಾದ’ ನಡೆಸಿದ ವೇಳೆ ಅಹವಾಲುಗಳನ್ನು ಆಲಿಸಿ ಅವರು ಮಾತನಾಡಿದರು.
ಆದರೂ, ನಾವು ಹಂತ-ಹಂತವಾಗಿ ಅವರ ಹಣ ಬಾಕಿ ಪಾವತಿಸುತ್ತಿದ್ದೇವೆ. ಮುಂದೆಯೂ ಇದನ್ನು ಪಾವತಿ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ. ಇನ್ನು ಯಾರಾದರೂ ಲಂಚ ಕೇಳುತ್ತಿದ್ದರೆ, ಅವರು ದೂರು ನೀಡಿ ದಾಖಲೆಗಳನ್ನು ಒದಗಿಸಲಿ. ನಂತರ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಚರ್ಚೆ ಮಾಡಿದರೆ ಪರಿಹಾರ ಸಿಗುವುದಿಲ್ಲ ಎಂದು ಅವರು ತಿಳಿಸಿದರು.
ಖಾತಾ ಮಾಡಿಸಲು 10-15 ಸಾವಿರ ರೂ.ಲಂಚ ಕೇಳುತ್ತಿರುವ ಬಗ್ಗೆ ಸ್ಥಳೀಯ ನಿವಾಸಿ ಸುಲ್ತಾನ್ ಮಿರ್ಝಾ ಅವರಿಂದ ದೂರು ಬಂದ ಹಿನ್ನೆಲೆಯಲ್ಲಿ ಕೆ.ಆರ್.ಪುರಂ ಕಂದಾಯ ಅಧಿಕಾರಿ ಬಸವರಾಜ್ ಅವರ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಎನ್.ಆರ್.ಬಡಾವಣೆಯ ನಿವಾಸಿ ವಿಘ್ನೇಶ್ ಎಂಬುವವರು ನಾನು 2 ವರ್ಷಗಳ ಹಿಂದೆ ನನ್ನ ನಿವೇಶನದಲ್ಲಿ ಮನೆ ಕಟ್ಟಿದ್ದೇನೆ. ಆ ಜಾಗ ಖರೀದಿ ಮಾಡಬೇಕೆಂದುಕೊಂಡಿದ್ದ ನೆರೆ ಮನೆಯ ವ್ಯಕ್ತಿ ಮಲ್ಲಿಕಾರ್ಜುನ್ ನಾನು ಕಟ್ಟಿರುವ ಮನೆಗೆ ಹೋಗಲು ಬಿಡುತ್ತಿಲ್ಲ. 10 ಲಕ್ಷ ರೂ. ನೀಡಿದರೆ ಮಾತ್ರ ಮನೆ ಪ್ರವೇಶಿಸಲು ಅವಕಾಶ ಎಂದು ರೌಡಿಗಳು ಹಾಗೂ ಕನ್ನಡಪರ ಸಂಘಟನೆಗಳ ಮೂಲಕ ಬೆದರಿಸುತ್ತಿದ್ದಾನೆ ಎಂದು ಕಣ್ಣೀರು ಹಾಕಿದರು.
ಇದಕ್ಕೆ ಸ್ಪಂದಿಸಿದ ಶಿವಕುಮಾರ್, ಅವರು ಯಾವ ಸಂಘಟನೆಯವರೆ ಆಗಿರಲಿ, ಕಾಂಗ್ರೆಸ್ ನವರೆ ಆಗಿರಲಿ, ಬಿಜೆಪಿಗರೆ ಆಗಿರಲಿ, ದಳದವರೆ ಆಗಿರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ. ನೀವು ಕೂಡಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸಂಜೆ ವೇಳೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ. ಒಮ್ಮೆ ದೂರು ಕೊಟ್ಟ ನಂತರ ಅದಕ್ಕೆ ಬದ್ಧವಾಗಿರಬೇಕು ಎಂದು ತಿಳಿಸಿದರು.
ಪಾಲಿಕೆ ಆಧಿಕಾರಿಗಳು ಆ ಜಾಗಕ್ಕೆ ಹೋಗಿ ಪರಿಸ್ಥಿತಿ ಏನಿದೆ ಎಂದು ಪರಿಶೀಲಿಸಿ, ಹಣ ಕೇಳಿ ಬೆದರಿಕೆ ಹಾಕಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಸೂಚನೆ ನೀಡಿದರು.







