ಮುಖ್ಯಮಂತ್ರಿ ಹೇಗೆ ಹೇಳುತ್ತಾರೋ ಹಾಗೆ ನಡೆಯುತ್ತೇವೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ಮುಖ್ಯಮಂತ್ರಿ ಹೇಳಿದ ಮೇಲೆ ಮುಗಿಯಿತು. ಅವರು ಹೇಳಿದ ಮೇಲೆ ಇನ್ನೇನಿದೆ? ಅವರು ಹೇಗೆ ಹೇಳುತ್ತಾರೋ ಹಾಗೆ ನಾವು ಕೇಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
‘ಹೈಕಮಾಂಡ್ ಒಪ್ಪಿದರೆ ನಾನೇ ಪೂರ್ಣಾವಧಿ ಮುಖ್ಯಮಂತ್ರಿ ಆಗಿರುತ್ತೇನೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಸೋಮವಾರ ದೇವನಹಳ್ಳಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ದಿಲ್ಲಿಗೆ ಖಾಸಗಿ ಭೇಟಿ: ದಿಲ್ಲಿಗೆ ಭೇಟಿ ನೀಡಿದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ನಮ್ಮ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯೆ ಅಂಬಿಕಾ ಸೋನಿಯವರ ಮನೆಗೆ ಭೇಟಿ ನೀಡಿದ್ದೆ. ಅವರ ಪತಿ ತೀರಿಕೊಂಡಿದ್ದರು. ಹೀಗಾಗಿ ಸಂತಾಪ ಸೂಚಿಸಲು ಅವರ ಮನೆಗೆ ಭೇಟಿ ನೀಡಿದ್ದೆ ಎಂದು ಹೇಳಿದರು.
ನಾನು ತಿಹಾರ್ ಜೈಲಿನಲ್ಲಿದ್ದಾಗ ಅವರು ಸೋನಿಯಗಾಂಧಿ ಜೊತೆ ಬಂದು ನನ್ನನ್ನು ಭೇಟಿ ಮಾಡಿದ್ದರು. ನನಗೂ ಅವರಿಗೂ ಬಹಳ ಆತ್ಮೀಯತೆ. ನಮ್ಮ ಪಕ್ಷದ ನಾಯಕರು ಅವರು. ಎಸ್.ಎಂ.ಕೃಷ್ಣ ಅಧಿಕಾರದಲ್ಲಿದ್ದಾಗ ನಮ್ಮ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿದ್ದರು. ನನ್ನನ್ನು ತಮ್ಮನಂತೆ ಕಂಡಿದ್ದರು, ನನ್ನ ಕೆಲಸಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಹಾಗಾಗಿ ನಾನು ಅವರ ಮನೆಗೆ ಭೇಟಿ ನೀಡಿದ್ದೆ ಎಂದು ಅವರು ತಿಳಿಸಿದರು.
ನೀವು ಹೈಕಮಾಂಡ್ ಭೇಟಿಗೆ ದಿಲ್ಲಿಗೆ ಹೋಗಿದ್ದಿರಿ ಎಂದು ಚರ್ಚೆಯಾಗುತ್ತಿದೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ನಾನು ದಿಲ್ಲಿಗೆ ಹೋಗಿದ್ದ ವಿಷಯ, ಕೆಲಸದ ಬಗ್ಗೆ ಮಾತ್ರ ಹೇಳಬಲ್ಲೆ. ಹೈಕಮಾಂಡ್ ಭೇಟಿ ಬಗ್ಗೆ ನೀವು ಮಾಧ್ಯಮದವರು, ಸಾರ್ವಜನಿಕರು, ಇನ್ನೂ ಬೇರೆಯವರು ಏನು ಬೇಕಾದರೂ ಚರ್ಚೆ ಮಾಡಿಕೊಳ್ಳಿ. ಯಾರು ಬೇಕಾದರೂ ಮಾತನಾಡಿಕೊಳ್ಳಲಿ. ನನಗೆ ಅದು ಸಂಬಂಧ ಪಡದ ವಿಷಯ. ನನ್ನ ಈ ಭೇಟಿ ಖಾಸಗಿಯಾದದ್ದು ಎಂದು ಹೇಳಿದರು.







