ಆರ್.ಅಶೋಕ್ ನೇತೃತ್ವದಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಸಮಿತಿ ರಚನೆಗೆ ಸಿದ್ಧ : ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಬೆಂಗಳೂರು, ನ.1: ಬೆಂಗಳೂರಿನಲ್ಲಿ ಸುರಂಗ ರಸ್ತೆ(ಟನಲ್)ನಿರ್ಮಾಣ ವಿಚಾರವಾಗಿ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿಯೇ ಸಮಿತಿ ರಚನೆ ಮಾಡಲು ನಾನು ತಯಾರಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಏರ್ಪಡಿಸಿದ್ದ 70ನೆ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶೋಕ್ ಸೂಚಿಸಿದ ಕಡೆಯೇ ಲಾಲ್ ಬಾಗ್ ಬಳಿ ಪ್ರವೇಶ-ನಿರ್ಗಮನ ತಾಣ ರೂಪಿಸಲಾಗುವುದು ಎಂದರು.
ವಿಪಕ್ಷ ನಾಯಕ ಅಶೋಕ್ ಅವರು ಧರಣಿ ಕೂರುವ ಅವಶ್ಯಕತೆಯಿಲ್ಲ. ಏಕೆಂದರೆ ಅವರು ಬೆಂಗಳೂರಿನವರು. ಇಲ್ಲಿಂದ ಏಳೆಂಟು ಬಾರಿ ಗೆದ್ದಿದ್ದಾರೆ. ಅವರಿಗೂ ಜವಾಬ್ದಾರಿಯಿದ್ದು, ಅವರ ನೇತೃತ್ವದಲ್ಲಿ ರಚಿಸಿದ ಸಮಿತಿಯೇ ಸರಕಾರಕ್ಕೆ ಸಲಹೆ, ನಿರ್ದೇಶನ ನೀಡಲಿ ಎಂದು ಅವರು ಹೇಳಿದರು.
ನಾನು ಶುಕ್ರವಾರ ರಾತ್ರಿ ಲಾಲ್ಬಾಗ್ ಬಳಿ ತೆರಳಿ ಎಲ್ಲೆಲ್ಲಿ ಸುರಂಗ ರಸ್ತೆಗೆ ಪ್ರವೇಶ ಕಲ್ಪಿಸಬಹುದು ಎಂದು ಪರಿಶೀಲನೆ ಮಾಡಿದ್ದೇನೆ. ಪರ್ಯಾಯ ಮಾರ್ಗಗಳ ಬಗ್ಗೆ ಆಲೋಚನೆ ನಡೆಸುತ್ತಿದ್ದೇನೆ. ಯಾವುದೇ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಶಿವಕುಮಾರ್ ಹೇಳಿದರು.
ನವೆಂಬರ್ ತಿಂಗಳಿನಲ್ಲಿ ಕಡ್ಡಾಯ ಕನ್ನಡದ ಧ್ವಜ: ಇಡೀ ನವೆಂಬರ್ ತಿಂಗಳಲ್ಲಿ ಖಾಸಗಿ ಹಾಗೂ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದ ಧ್ವಜ ಹಾರಿಸುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.







