ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿಯೇ ಶಾಶ್ವತವಾಗಿ ಇರಲು ಸಾಧ್ಯವಿಲ್ಲ, ಬೇರೆಯವರಿಗೆ ಅವಕಾಶ ನೀಡಬೇಕು : ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಬೆಂಗಳೂರು : ನಾನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಹುದ್ದೆಯಲ್ಲಿಯೇ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ನಾನು ಅಧ್ಯಕ್ಷನಾಗಿ ಈಗಾಗಲೇ ಐದೂವರೆ ವರ್ಷವಾಗಿದೆ, ಮುಂದಿನ ಮಾರ್ಚ್ ಬಂದರೆ ಆರು ವರ್ಷವಾಗಲಿದೆ. ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಅಧ್ಯಕ್ಷ ಸ್ಥಾನ ತೊರೆಯುವ ಸೂಚನೆ ನೀಡಿದ್ದಾರೆ.
ಬುಧವಾರ ಇಲ್ಲಿನ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ‘ಇಂದಿರಾ ಗಾಂಧಿ ಜನ್ಮದಿನದ ಕಾರ್ಯಕ್ರಮ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಉಪಮುಖ್ಯಮಂತ್ರಿಯಾದ ದಿನವೇ ಈ ಹುದ್ದೆ ಬಿಡಬೇಕು ಎಂದು ನಿರ್ಧರಿಸಿದ್ದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಇನ್ನು ಸ್ವಲ್ಪ ದಿನ ಮುಂದುವರಿಯಲು ಹೇಳಿದ್ದಾರೆ. ಹೀಗಾಗಿ ನಾನು ನನ್ನ ಕರ್ತವ್ಯ ನಿಭಾಯಿಸುತ್ತಿದ್ದೇನೆ ಎಂದು ತಿಳಿಸಿದರು.
ನಾನು ಎಲ್ಲಿದ್ದೇನೆ. ಏನಾಗಿದ್ದೇನೆ ಎನ್ನುವುದು ಮುಖ್ಯವಲ್ಲ. ನನ್ನ ಅವಧಿಯಲ್ಲಿ ಮಾಡಿದ ಕೆಲಸಗಳು ಶಾಶ್ವತವಾಗಿರುತ್ತದೆ. ಪಕ್ಷದ 100 ಹೊಸ ಭವನಗಳನ್ನು ಆರಂಭಿಸಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ಒಂದು ಮಾದರಿಯನ್ನು ಸ್ಥಾಪಿಸಿದ್ದೇನೆ. ನಾನು ನಾಯಕತ್ವದಲ್ಲಿ ಇರುತ್ತೇನೆ, ತಲೆಕೆಡಿಸಿಕೊಳ್ಳಬೇಡಿ ಎಂದು ಅವರು ಹೇಳಿದರು.
ದೇಶದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಜನ್ಮದಿನ ಆಚರಿಸುತ್ತಿದ್ದೇವೆ. ಅವರು ದೇಶದ ಮಹಿಳಾ ಶಕ್ತಿಯ ಚಿಹ್ನೆ, ದೇಶ ಪ್ರೇಮ, ದೃಢ ನಿಶ್ಚಯ, ಧೈರ್ಯದ ಪ್ರತೀಕವಾಗಿದ್ದಾರೆ. ಸೋನಿಯಾ ಗಾಂಧಿ ಅವರು ನನ್ನನ್ನು ಕರೆದು ಇಂದಿರಾ ಗಾಂಧಿ ಅವರ ಸಮಾಧಿ ಸುತ್ತಮುತ್ತಲ ಜಾಗ ಅಭಿವೃದ್ಧಿಪಡಿಸಲು ಸೂಚಿಸಿದ್ದರು. ಜೊತೆಗೆ ಪೆರಂಬೂರಿನಲ್ಲಿರುವ ರಾಜೀವ್ ಗಾಂಧಿ ಅವರ ಸಮಾಧಿಗೆ ಗ್ರಾನೈಟ್ ಹಾಕುವ ಭಾಗ್ಯ ನನಗೆ ಸಿಕ್ಕಿದೆ. ನಾನು ಹಾಗೂ ನನ್ನ ಸಹೋದರ ನಮ್ಮದೇ ಕ್ವಾರೆಯಿಂದ ಗ್ರಾನೈಟ್ ಕಲ್ಲನ್ನು ತೆಗೆದುಕೊಂಡು ಹೋಗಿ ಅಲ್ಲಿ ಹಾಕಿ ನಮ್ಮ ಕೈಲಾದ ಸೇವೆ ಮಾಡುವ ಭಾಗ್ಯ ಸಿಕ್ಕಿತು ಎಂದು ಅವರು ಸ್ಮರಿಸಿದರು.
ಇಂದಿರಾ ಗಾಂಧಿ ಅವರು ಜಾರಿ ಮಾಡಿರುವ ಯೋಜನೆಗಳನ್ನು ಯಾವುದೇ ಸರಕಾರ ಬಂದರೂ, ನಿಲ್ಲಿಸಲು ಸಾಧ್ಯವಿಲ್ಲ. ನಮ್ಮ ಕಾಂಗ್ರೆಸ್ ಸರಕಾರದಲ್ಲಿ ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು, ಶೈಕ್ಷಣಿಕ ಹಕ್ಕು, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು 371ಜೆ ಜಾರಿಗೆ ತರಲಾಗಿದೆ. ಎಸ್.ಎಂ. ಕೃಷ್ಣ ಅವರ ಸರಕಾರದಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಆಡ್ವಾಣಿ ಅವರು ಇದು ಸಾಧ್ಯವಿಲ್ಲ ಎಂದು ಬರೆದರು. ಆದರೆ ಕಾಂಗ್ರೆಸ್ ಸರಕಾರ ಸಂವಿಧಾನದ ಮೂಲಕ ಜಾರಿಗೆ ತಂದಿತು ಎಂದು ಅವರು ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ: ರಾಜಕೀಯದಲ್ಲಿ ಶೇ.33ರಷ್ಟು ಮೀಸಲಾತಿ ಬರುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ನಾವು ಮಹಿಳಾ ನಾಯಕತ್ವವನ್ನು ಬೆಳೆಸಬೇಕು. ನಾಯಕರ ಕುಟುಂಬದವರನ್ನು ನಾಯಕರಾಗಿ ಬೆಳೆಯುವುದು ಮುಖ್ಯವಲ್ಲ, ಹೊಸ ಪ್ರತಿಭೆಗಳನ್ನು ಗುರುತಿಸಿ ಬೆಳೆಸಬೇಕು. ಬೆಂಗಳೂರಿನಲ್ಲಿ ಜಿಬಿಎ ಮೂಲಕ 369 ವಾರ್ಡ್ಗಳನ್ನು ಮಾಡಲಾಗಿದ್ದು, ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಜೊತೆಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಬೇಕು ಎಂದು ಅವರು ತಿಳಿಸಿದರು.
ಪಕ್ಷವನ್ನು ಮರೆತವರಿಗೆ ಎಐಸಿಸಿ ನಾಯಕರಿಂದಲೇ ಉತ್ತರ: ಸಧ್ಯದಲ್ಲಿ ನೂರು ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದಕ್ಕೆ ಯಾರು ಸಹಕಾರ ನೀಡಿದ್ದಾರೆ, ನೀಡಿಲ್ಲ ಎಂದು ಪಟ್ಟಿ ನೀಡಿ ಎಂದು ಎಐಸಿಸಿ ನಾಯಕರು ತಿಳಿಸಿದ್ದಾರೆ. ಕೆಲವರು ಆಸಕ್ತಿ ತೋರಿದ್ದಾರೆ, ಕೆಲವರು ಆಸಕ್ತಿ ತೋರಿಲ್ಲ. ಕೆಲವರಿಗೆ ಕೇವಲ ಅಧಿಕಾರ ಮಾತ್ರ ಬೇಕು. ಈ ಕಾಂಗ್ರೆಸ್ ಕಚೇರಿ ದೇವಾಲಯ ಎಂಬುದನ್ನು ಕೆಲವರು ಮರೆತಿದ್ದಾರೆ. ಇದಕ್ಕೆ ನಾನು ಉತ್ತರ ನೀಡುವುದಿಲ್ಲ. ದಿಲ್ಲಿಯ ನಾಯಕರು ಸರಿಯಾದ ಸಮಯದಲ್ಲಿ ಉತ್ತರ ನೀಡುತ್ತಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಇಂದಿರಾ ಗಾಂಧಿ ಅವರ ಆಯ್ದ ನುಡಿಮುತ್ತುಗಳ’ ಬಗ್ಗೆ ಸೋನಿಯಾ ಗಾಂಧಿ ಅವರು ಬರೆದಿರುವ ಪುಸ್ತಕವನ್ನು ಡಿ.ಕೆ. ಶಿವಕುಮಾರ್ ಕನ್ನಡಕ್ಕೆ ತರ್ಜುಮೆ ಮಾಡಿರುವ ಕೃತಿಯನ್ನು ಬಿಡುಗಡೆ ಮಾಡಿದರು.
ಇದೇ ವೇಳೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ವಾಸಂತಿ ಶಿವಣ್ಣ, ಮುಮ್ತಾಝ್ ಬೇಗಂ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಸೊರಕೆ, ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ ಮತ್ತಿತರರು ಭಾಗವಹಿಸಿದ್ದರು.
‘ಪಕ್ಷ ಏನು ಹೇಳುತ್ತದೆಯೋ ಅದನ್ನು ನಾನು ಪಾಲಿಸುತ್ತೇನೆ. ಪಕ್ಷದ ಅದ್ಯಕ್ಷರಾದವರು ಹೇಗೆ ಕೆಲಸ ಮಾಡಬೇಕು ಎಂದು ನಾನು ಉದಾಹರಣೆಯಾಗಬೇಕು. ಪಕ್ಷದಲ್ಲಿ ನಮ್ಮ ಗುರುತು ಬಿಟ್ಟುಹೋಗಬೇಕು. ನಾನು ಈ ವಿಚಾರವಾಗಿ ಮಾತನಾಡುತ್ತಿದ್ದೇನೆ ಹೊರತು, ತ್ಯಾಗ ಅಥವಾ ಓಡಿ ಹೋಗುವ ಬಗ್ಗೆ ಮಾತನಾಡುತ್ತಿಲ್ಲ. ನಾನು ಓಡಿ ಹೋಗುವ ಮನುಷ್ಯನಲ್ಲ. ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಅಧ್ಯಕ್ಷರು ಎಲ್ಲಿಯವರೆಗೂ ಜವಾಬ್ದಾರಿ ನಿಭಾಯಿಸಲು ಸೂಚಿಸುತ್ತಾರೋ ಅಲ್ಲಿಯವರೆಗೂ ನಾನು ಕರ್ತವ್ಯ ನಿಭಾಯಿಸುತ್ತೇನೆ’
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ







