ಸಿದ್ದರಾಮಯ್ಯ ನಮ್ಮ ಪಕ್ಷಕ್ಕೆ ದೊಡ್ಡ ಆಸ್ತಿ : ಡಿ.ಕೆ.ಶಿವಕುಮಾರ್

ಬೆಂಗಳೂರು : ‘ಸಿದ್ದರಾಮಯ್ಯನವರು ಹೇಳಿದ ಮೇಲೆ ಅದೇ ನಮಗೆ ವೇದವಾಕ್ಯ. ಅವರ ಮಾತಿಗೆ ಗೌರವ ನೀಡುತ್ತೇನೆ. ಸಿದ್ದರಾಮಯ್ಯ ನಮ್ಮ ಪಕ್ಷಕ್ಕೆ ದೊಡ್ಡ ಆಸ್ತಿ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ನಾವೆಲ್ಲರೂ ಹೈಕಮಾಂಡ್ ಮೇಲೆ ಗೌರವವನ್ನು ಇಟ್ಟಿದ್ದೇವೆ. ಅಧಿಕಾರ ಹಂಚಿಕೆ ಬಗ್ಗೆ ನಾನಾಗಲಿ ಯಾರೂ ಮಾತನಾಡಿಲ್ಲ’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.
ಸೋಮವಾರ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಾಧ್ಯಮದವರು ಅನವಶ್ಯಕವಾಗಿ ಇದರ ಬಗ್ಗೆ ಸುದ್ದಿ ಮಾಡುತ್ತಿದ್ದು, ಗೊಂದಲ ಮೂಡಿಸುತ್ತಿದ್ದಾರೆ. ನನಗೂ ಹಾಗೂ ಯಾರಿಗೂ ಗೊಂದಲಗಳಿಲ್ಲ. ಏನಾದರೂ ಇದ್ದರೆ ನಾನು ಹಾಗೂ ಪಕ್ಷದ ಹೈಕಮಾಂಡ್ ಬಗೆಹರಿಸಿಕೊಳ್ಳುತ್ತೇವೆ. ಏನೇ ತೀರ್ಮಾನ ಆಗಿದ್ದರು ಅದು ಒಂದು ಕೊಠಡಿಯ ಆಂತರಿಕ ಚೌಕಟ್ಟಿನ ಒಳಗೆ ಆಗಿರುತ್ತದೆ ಎಂದು ಅವರು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಮೊನ್ನೆಯೇ ದಿಲ್ಲಿಯಲ್ಲಿ ಭೇಟಿ ಮಾಡಿದ್ದೇನೆ. ಪದೇ, ಪದೇ ಭೇಟಿ ಮಾಡುವುದು ಸರಿಯಲ್ಲ. ಸಂದರ್ಭ ಬಂದರೆ ಭೇಟಿ ಮಾಡುತ್ತೇನೆ. ಅವರು ದಿಲ್ಲಿಗೆ ಹೋಗಿ ಬಂದ ನಂತರ ಭೇಟಿಗೆ ಅವಕಾಶ ಕೇಳುತ್ತೇನೆ. ಸುಮ್ಮನೆ ಅವರಿಗೆ ತೊಂದರೆ ಕೊಡುವುದು ಬೇಡ. ಮಾಧ್ಯಮ ಪ್ರತಿನಿಧಿಗಳೆ ಎಲ್ಲರ ಉದ್ವೇಗ ಜಾಸ್ತಿ ಮಾಡುತ್ತೀದ್ದೀರಿ. ನಮಗೆಲ್ಲ ಯಾವುದೇ ತೊಂದರೆಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ದಿಲ್ಲಿಗೆ ಹೋಗುವವರನ್ನು ಬೇಡ ಎನ್ನಲು ಆಗುತ್ತದೆಯೇ?:
‘ಶಾಸಕರಿಗೆ ಮಂತ್ರಿ ಆಗಬೇಕೆನ್ನುವ ಆಸೆ ಇರುತ್ತದೆ. ಅವರು ದಿಲ್ಲಿಗೆ ಹೋದರೆ ತಪ್ಪೇನಿದೆ. ದಿಲ್ಲಿಗೆ ಹೋಗುವವರನ್ನು ಬೇಡ ಎನ್ನಲು ಆಗುತ್ತದೆಯೇ?. ದಿಲ್ಲಿಯಲ್ಲಿನ ನಮ್ಮ ಪಕ್ಷದ ಕಚೇರಿ ನಮಗೆಲ್ಲ ದೇವಸ್ಥಾನವಿದ್ದಂತೆ. ತಮ್ಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಹೋಗುತ್ತಾರೆ’ ಎಂದು ಶಿವಕುಮಾರ್ ನುಡಿದರು.
‘ಪಕ್ಷ ವಿರೋಧಿ ಹೇಳಿಕೆ ನೀಡಿ, ಗುಂಪುಗಾರಿಕೆ ಮಾಡಿ, ಪ್ರತ್ಯೇಕ ಸಭೆಗಳನ್ನು ಮಾಡಿ ಪಕ್ಷದ ವಿರುದ್ಧ ಹೋದರೆ ಶಿಸ್ತು ಉಲ್ಲಂಘನೆಯಾಗುತ್ತದೆ. ಇದೀಗ ಏನು ಉಲ್ಲಂಘನೆ ಆಗುತ್ತದೆ?. ಯಾರಾದರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಾರೆಯೇ? ಸಚಿವ ಸಂಪುಟ ಪುನರ್ ರಚನೆ ಮಾಡಲಾಗುತ್ತದೆ ಎನ್ನುವ ಕಾರಣಕ್ಕೆ ತಮಗೂ ಅವಕಾಶ ಸಿಗಲಿ ಎಂದು ಕೆಲವರು ದಿಲ್ಲಿಗೆ ಹೋಗಿದ್ದಾರೆ ಎಂದು ಅವರು ವಿವರಣೆ ನೀಡಿದರು.
ಏಕಾಏಕಿ ತೀರ್ಮಾನ ಆಗುತ್ತದೆಯೇ?:
‘ಖರ್ಗೆ ಅವರು ಹೈಕಮಾಂಡ್ ಎಂದು ಏಕೆ ಹೇಳಿದ್ದಾರೆಂದರೆ ಪಕ್ಷದಲ್ಲಿ ಒಂದಷ್ಟು ನಾಯಕರನ್ನು ಒಳಗೊಂಡ ಸಮಿತಿಯಿದೆ. ನಾನು ಕೆಪಿಸಿಸಿ ಅಧ್ಯಕ್ಷನಾದ ತಕ್ಷಣ ಏಕಾಏಕಿ ತೀರ್ಮಾನ ಮಾಡಲು ಆಗುತ್ತದೆಯೇ?. ಇತ್ತೀಚಿಗೆ ಪರಿಷತ್ತಿಗೆ ನಾಲ್ಕು ಜನರ ಹೆಸರನ್ನು ಅಂತಿಮಗೊಳಿಸುವಾಗ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರು, ಅಧ್ಯಕ್ಷರು, ಆಂಕಾಕ್ಷಿಗಳನ್ನು ಕರೆದು ಮಾತನಾಡಿದ್ದೇನೆ’ ಎಂದರು.
‘ಇಷ್ಟು ಜನ ಅರ್ಜಿ ಹಾಕಿದ್ದಾರೆ. ಇಂತಹವರ ಅಭಿಪ್ರಾಯ ಈ ರೀತಿಯಿದೆ, ಅವರ ಹಿನ್ನೆಲೆ ಈ ರೀತಿಯಿದೆ ಎಂದು ಕಳುಹಿಸುತ್ತೇನೆ. ಆ ದಾಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಚುನಾವಣಾ ಸಮಿತಿ ಎಂದ ಮೇಲೆ ಒಬ್ಬರೇ ಮಾಡುತ್ತಾರಾ? ಹತ್ತಾರು ಜನ ಸೇರಿ ತೀರ್ಮಾನ ಮಾಡುತ್ತಾರೆ ಎಂದು ಶಿವಕುಮಾರ್ ನುಡಿದರು.
ಕುದುರೆ ವ್ಯಾಪಾರ ಬಿಜೆಪಿ ಸಂಸ್ಕೃತಿ :
‘ಶಾಸಕರ ಖರೀದಿ ಹಾಗೂ ಕುದುರೆ ವ್ಯಾಪಾರ ಬಿಜೆಪಿ ಸಂಸ್ಕೃತಿ. ಕುದುರೆ ವ್ಯಾಪಾರದ ಪಿತಾಮಹರು ಬಿಜೆಪಿಯವರು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಶಾಸಕರ ಖರೀದಿ ಮಾಡಲಾಗುತ್ತಿದೆ’ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಬಿಜೆಪಿಯವರಿಗೆ ಕುದುರೆ ವ್ಯಾಪಾರ ಮಾಡಿ ರೂಢಿ. ಜೆಡಿಎಸ್ ಪಕ್ಷದವರು ಇದಕ್ಕೆ ಬಲಿಯಾದರು. ಅವರೆಲ್ಲ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಬಿಜೆಪಿ ಸರಕಾರ ರಚನೆಯಾದಾಗ ಅವರು ಎಷ್ಟು ಸಾವಿರ ಕೋಟಿ ರೂ.ಖರ್ಚು ಮಾಡಿದ್ದರು. ಹೋಟೆಲ್ ಬಿಲ್ ರೀತಿ ದೋಸೆ, ಇಡ್ಲಿ, ಚಟ್ನಿಗೆ ಇಷ್ಟು ಎಂದು ‘ಆಪರೇಷನ್ ಕಮಲ’ದ ವೇಳೆ ಪ್ರತಿ ಹುದ್ದೆಗಳಿಗೆ ಇಂತಿಷ್ಟಿ ಎಂದು ದರ ನಿಗದಿ ಮಾಡಿರಲಿಲ್ಲವೇ? ಎಂದು ಪ್ರಶ್ನಿಸಿದರು.
‘ಸಿಎಂ ಹುದ್ದೆಗೆ ಎಷ್ಟು ಹಣ ನೀಡಬೇಕಾಗಿತ್ತು, ಮಂತ್ರಿ ಹುದ್ದೆಗೆ ಎಷ್ಟು ಹಣ ನೀಡಲಾಗಿದೆ ಎಂದು ಅವರದೇ ಪಕ್ಷದ ನಾಯಕರು ಬಹಿರಂಗ ಹೇಳಿಕೆ ನೀಡಿದ್ದಾರೆ. ಅವರು ಎಷ್ಟು ಹಣ ಆಮೀಷ ಒಡ್ಡಿದ್ದರು ಎಂದು ವಿಧಾನಸಭೆಯಲ್ಲೂ ಪ್ರಸ್ತಾಪವಾಗಿದ್ದು, ದಾಖಲೆಗಳಲ್ಲಿ ಸೇರಿದೆ. ಇದೀಗ ಬಿಜೆಪಿಯವರು ತಮ್ಮ ಪ್ರವೃತ್ತಿಯನ್ನು ನೆನೆಸಿಕೊಳ್ಳುತ್ತಿದ್ದಾರೆ’ ಎಂದು ಶಿವಕುಮಾರ್ ಹರಿಹಾಯ್ದರು.
ಪಕ್ಷದಲ್ಲಿ ಯಾವುದೇ ಬಂಡಾಯವೂ ಇಲ್ಲ: ‘ಎಐಸಿಸಿ ನನಗೆ ಯಾವುದೇ ಜವಾಬ್ದಾರಿಯನ್ನೂ ಕೊಟ್ಟಿಲ್ಲ. ನಾನು ಯಾರ ಪ್ರತಿನಿಧಿಯಾಗಿಯೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿಲ್ಲ. ಅವರು ನನ್ನ ಸಂಪುಟದ ಸಹೋದ್ಯೋಗಿ. ಹಾಗಾಗಿ ಭೇಟಿ ಮಾಡಿದ್ದೇನೆ. ಜಿಬಿಎ ಚುನಾವಣೆಗೆ ವಿಚಾರವಾಗಿ ಮಾತನಾಡಿದ್ದೇನೆ, ಬೇರೆ ಯಾವ ವಿಚಾರವನ್ನೂ ಚರ್ಚಿಸಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಂಡಾಯವೂ ಇಲ್ಲ, ಶಮನ ಎಲ್ಲಿಂದ. ಕಾಂಗ್ರೆಸ್ ಎಲ್ಲ ಶಾಸಕರದ್ದು ಒಂದೇ ಕುಟುಂಬ, ಯಾವುದೇ ಬಣ ಇಲ್ಲ’
-ಕೆ.ಜೆ.ಜಾರ್ಜ್ ಇಂಧನ ಸಚಿವ







