ನನ್ನ ಹೋರಾಟ ಅಧಿಕಾರಕ್ಕಾಗಿ ಅಲ್ಲ; ಪಕ್ಷದ ಒಳಗಲ್ಲ, ನನ್ನ ಹೋರಾಟ ಪಕ್ಷದ ಹೊರಗೆ : ಡಿ.ಕೆ.ಶಿವಕುಮಾರ್

ಡಿ.ಕೆ. ಶಿವಕುಮಾರ್
ಬೆಂಗಳೂರು : ನಾನು ಸ್ಟ್ರೀಟ್ ಫೈಟರ್, ಹೇಗೆ ಹೋರಾಟ ಮಾಡಬೇಕೆಂದು ನನಗೆ ಗೊತ್ತಿದೆ. ನನ್ನ ಹೋರಾಟ ಅಧಿಕಾರಕ್ಕಾಗಿ ಅಲ್ಲ. ಪಕ್ಷದ ಒಳಗಲ್ಲ, ನನ್ನ ಹೋರಾಟ ಪಕ್ಷದ ಹೊರಗೆ. ನಾನು ಸುಮ್ಮನಾಗಿದ್ದೇನೆ ಎಂದು ಭಾವಿಸಿದರೆ ಅದು ಅವರಿಗೆ ಬಿಟ್ಟ ವಿಚಾರ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರಕಾರ ಕಾರ್ಮಿಕರಿಂದ ಮೂರು ಪಟ್ಟು ಟಿಕೆಟ್ ಹಣ ಸುಲಿಗೆ ಮಾಡುತ್ತಿದೆ ಎಂದು ಗೊತ್ತಾದ ತಕ್ಷಣ ಪಕ್ಷದ ವತಿಯಿಂದ 1 ಕೋಟಿ ರೂ.ಚೆಕ್ ವಿತರಣೆ ನೀಡಲು ಮುಂದಾದವನು. ನಾನೇ ಖುದ್ದಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೂತು ಸಂಜೆ ವೇಳೆಗೆ ಇಡೀ ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದೆ. ಉಚಿತ ಬಸ್ ವ್ಯವಸ್ಥೆ ಜತೆಗೆ ರೈಲ್ವೇ ದರ ಕಡಿಮೆ ಮಾಡಿಸಿದವನು ಎಂದರು.
ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಜಿಲ್ಲಾ ಸಚಿವರು ಹೆದರಿ ಬಂದು ಕೇವಲ ಇಬ್ಬರು ಮಾತ್ರ ಸತ್ತಿದ್ದಾರೆಂದಾಗ, ನಾನು ಆ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದೆ. ಅವರಿಗೆಲ್ಲಾ ಈಗ ಕೆಲಸವನ್ನು ಕೊಡಿಸುತ್ತಿದ್ದೇನೆ. ಈ ವಿಚಾರವಾಗಿ ವಿಧಾನಸಭೆಯಲ್ಲಿ ಏನು ಮಾತನಾಡಿದ್ದೇನೆ ಎಂದು ಎಲ್ಲರಿಗೂ ಗೊತ್ತಿದೆ. ನಾನು ಹೀಗೆ ಹೋರಾಟ ಮಾಡಿಕೊಂಡು ಬಂದವನು ಎಂದರು.
ನಾನು ಯಾಕೆ ಕ್ರಾಂತಿ ಮಾಡಲಿ. ನನಗೆ ನನ್ನ ಮೇಲೆ ನಂಬಿಕೆ ಇದೆ. ನಾನು ಭರವಸೆ ಮೇಲೆ ಬದುಕುತ್ತೇನೆ ಎಂದ ಅವರು, ನಾನು ಪ್ರಯತ್ನ ಮಾಡುವ ಅಗತ್ಯವಿಲ್ಲ. ನನಗೆ ಯಾವಾಗ ಯಾವುದು ಬರಬೇಕೋ ಅದು ಬರುತ್ತದೆ. ಆ ಆತ್ಮವಿಶ್ವಾಸ ನನಗಿದೆ. ಸಧ್ಯದಲ್ಲೇ ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.
ತೊಂದರೆ ಆಗಬಾರದು: ನಾನು ಇದುವರೆಗೂ ಸಿಎಂ ವಿಚಾರವಾಗಿ ಮಾತನಾಡಿಲ್ಲ. ನನ್ನ ವಿಚಾರದಲ್ಲಿ ನಾನುಂಟು, ಸಿಎಂ ಉಂಟು, ಪಕ್ಷದ ಹೈಕಮಾಂಡ್ ಉಂಟು. ಕೆಲವು ನಿರ್ಧಾರ ಕೈಗೊಂಡಾಗ ನಾನು ಭಾಗಿಯಾಗಿದ್ದೆ ಎಂದು ಹೇಳಿರುವುದು ಬಿಟ್ಟು ಉಳಿದಂತೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಸಿಎಂ ಹುದ್ದೆ ಖಾಲಿಯಾಗುತ್ತದೆ. ಸಿಎಂ ಹುದ್ದೆಯಿಂದ ಇಳಿಯುತ್ತಾರೆ. ದಲಿತರಿಗೆ ಸಿಎಂ ಹುದ್ದೆ ಸಿಗಬೇಕು, ಬೇರೆಯವರಿಗೆ ಸಿಗಬೇಕೆಂದು ಎಲ್ಲಿಯೂ ಹೇಳಿಲ್ಲ. ಸಿಎಂ ಹುದ್ದೆ ಖಾಲಿ ಮಾಡಿಸಲು ಹೊರಟಿರುವವರು ಬೇರೆಯವರು. ಅವರು ಮಾತಾಡಿದ್ದಾರೆ. ಸಿಎಂ ಸ್ಥಾನ ಖಾಲಿ ಆದರೆ ಅಲ್ಲವೇ ಬೇರೆಯವರಿಗೆ ನೀಡುವುದು ಏಂದು ಅವರು ಪ್ರತಿಕ್ರಿಯೆ ನೀಡಿದರು.
‘ನಾನು ಪಕ್ಷದ ಅಧ್ಯಕ್ಷನಾಗಿ ನನಗೆ ನನ್ನ ಜವಾಬ್ದಾರಿಗಳು ತಿಳಿದಿದೆ. ಈ ಪಕ್ಷಕ್ಕೆ ನನ್ನಿಂದ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು, ನನ್ನಿಂದ ಶಿಸ್ತು ಉಲ್ಲಂಘನೆ ಆಗಬಾರದು. ಅಧ್ಯಕ್ಷ ಸ್ಥಾನದಲ್ಲಿ ಕೂತು, ಆ ಸ್ಥಾನಕ್ಕೆ ಅನ್ಯಾಯ ಮಾಡಬಾರದು. ನನ್ನಿಂದ ತಪ್ಪಾಗಿದೆ ಎಂದು ಬೇರೆಯವರು ನನ್ನ ಕಡೆ ಬೆರಳು ತೋರಬಾರದು. ನಾನು ತಾಳ್ಮೆಯಿಂದ ಇದ್ದೇನೆ. ಏನೆಲ್ಲಾ ಆಗುತ್ತಿದೆ ಎಂದು ನನಗೆ ಅರಿವಿದೆ. ನಾವು ಕಟ್ಟಿ ಬೆಳೆಸಿರುವ ಪಕ್ಷ ಇದು. ನನ್ನಂತಹ ಲಕ್ಷಾಂತರ ಕಾರ್ಯಕರ್ತರಿಗೆ ತೊಂದರೆಯಾಗಬಾರದು. ಅವರೆಲ್ಲಾ ಸೇರಿ ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ. ಸ್ವಾರ್ಥಕ್ಕಾಗಿ ನಾನು ಬ್ಲಾಕ್ಮೇಲ್ ಮಾಡುವುದಿಲ್ಲ. ಪಕ್ಷಕ್ಕೆ ತೊಂದರೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಿಮ್ಮಿಬ್ಬರ ನಡುವಿನ ಸಂಬಂಧ ಹಾಲು ಜೇನಿನ ಸಂಬಂಧವೇ ಖಂಡಿತಾ ಇದೆ. 2023ರ ಚುನಾವಣೆ ಮಾತ್ರವಲ್ಲ, 2028ರ ಚುನಾವಣೆಯಲ್ಲೂ ಇದು ಹಾಗೇ ಇರುತ್ತದೆ ಎಂದ ಅವರು, ಸಿದ್ದರಾಮಯ್ಯ ಅವರು ಬೇರೆ ಪಕ್ಷದಲ್ಲಿದ್ದಾಗಲೂ ನನ್ನನ್ನು ನೋಡಿದ್ದಾರೆ. ನಮ್ಮ ಪಕ್ಷಕ್ಕೆ ಬಂದ ನಂತರವೂ ನನ್ನನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ನಾನು ಏನು ಎಂಬುದು ಅವರಿಗೆ ಗೊತ್ತಿದೆ ಎಂದು ಅವರು ಹೇಳಿದರು.
ಹೊಸ ರಕ್ತ, ಹೊಸ ಆಲೋಚನೆ ಪಕ್ಷಕ್ಕೆ ಬೇಕು: ಕೆಪಿಸಿಸಿಗೆ ಹೊಸ ರಕ್ತ ಬರಬೇಕು. ಹೊಸ ಆಲೋಚನೆ ಬರಬೇಕು. ನಾವೆಲ್ಲಾ ಮೊದಲ ಬಾರಿ ಶಾಸಕರಾದಾಗಲೇ ಮಂತ್ರಿಯಾದವರು. ನಾನು ಡಾ.ಪರಮೇಶ್ವರ್, ಎಚ್.ಕೆ.ಪಾಟೀಲ್, ರಾಮಲಿಂಗಾ ರೆಡ್ಡಿ ಎಲ್ಲರೂ ಮಂತ್ರಿಯಾದವರೇ. ನಾವಿಗ ಹಿರಿಯ ನಾಗರಿಕರಾಗಿದ್ದೇವೆ. ಹೊಸಬರು ಬರಲಿ ಎಂದ ಅವರು, ಕೆಪಿಸಿಸಿಗೆ ಹೊಸಬರು ಬರಬೇಕೆಂಬ ಬಗ್ಗೆ ನಾನು ನನ್ನ ಅಭಿಪ್ರಾಯ ತಿಳಿಸಿದ್ದೇನೆ ಎಂದರು.
ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಮಾ.10ರಂದು ಭೋಜನ ಕೂಟ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರು.
ನಮ್ಮ ಪಕ್ಷದ 145 ಶಾಸಕರು, 30 ಪರಿಷತ್ ಸದಸ್ಯರು ಸೇರಿದಂತೆ 175ಶಾಸಕರೂ ಸೇರಿ ಎಲ್ಲರಿಗೂ ಎಲ್ಲ ಸ್ಥಾನ ಸಿಗಬೇಕು ಎಂಬ ಆಸೆ ಇರುತ್ತದೆ. ಮೋದಿ ಅವರು ಶಾಸಕರಾಗದೇ ಸಿಎಂ ಆಗಿ ಇದೀಗ ಪ್ರಧಾನಿ ಆಗಿಲ್ಲವೇ. ನೀವು ಬೇಕಾದರೆ ಪ್ರಯತ್ನ ಮಾಡಿ ಎಂದ ಅವರು, ಕೆಲವು ಜಿಲ್ಲಾಧ್ಯಕ್ಷರು ಹಾಗೂ ಕಾರ್ಯಕರ್ತರ ಅಧಿಕಾರ ಅವಧಿ ಮುಗಿದಿದ್ದರೂ ನಾನೇ ಸಿಎಂ ಅವರಿಗೆ ಹೇಳಿ ಮುಂದಿನ ಆದೇಶದ ವರೆಗೂ ವಿಸ್ತರಣೆ ಮಾಡಿಸಿದ್ದೇನೆ. ಹೊಸಬರಿಗೂ ಅಧಿಕಾರ ಕೊಡಬೇಕು, ಅದನ್ನು ಕೊಡುತ್ತೇವೆ ಎಂದರು.






