ಬೆಂಗಳೂರಿನ ಜನರಿಗೆ ಭೂಮಿ ಗ್ಯಾರಂಟಿ : ಡಿ.ಕೆ.ಶಿವಕುಮಾರ್

ಬೆಂಗಳೂರು : ಜನಸಾಮಾನ್ಯರು ಸಂಪಾದಿಸಿದ ಆಸ್ತಿಗಳಿಗೆ ಸರಿಯಾದ ದಾಖಲೆಗಳನ್ನು ಒದಗಿಸಿಕೊಡಬೇಕು ಎಂದು ನಾವು ಆರನೇ ಗ್ಯಾರಂಟಿ ಯೋಜನೆಯಾಗಿ ಭೂಮಿ ಗ್ಯಾರಂಟಿಯನ್ನು ಜಾರಿಗೆ ತಂದಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನರ ಮನೆ ಬಾಗಿಲಿಗೆ ಇ-ಖಾತೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ. ‘ಬಿ’ ಯಿಂದ ‘ಎ’ ಖಾತೆ ಬದಲಾವಣೆ ಮಾಡಿಕೊಡುತ್ತಿದ್ದೇವೆ. ಜನರ ಅನುಕೂಲಕ್ಕಾಗಿ ಸರಕಾರ ಭೂ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ ಎಂದರು.
ಬ್ಯಾನರ್ ತೆಗಿಸಿದ್ದೇನೆ: ‘ಬ್ಯಾನರ್ ಹಾಕಬೇಡಿ, ಕೇಸ್ ಹಾಕಲಾಗುವುದು’ ಎಂದು ನಾನೇ ಹೇಳಿದ್ದೆ. ಆದರೂ ಅಭಿಮಾನದಿಂದ ಕೆಲವರು ನನ್ನ ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕಿಸಿದ್ದಾರೆ. ನಾನೇ ಹಲವರಿಗೆ ಹೇಳಿ ಬ್ಯಾನರ್‍ಗಳನ್ನು ತೆಗಿಸಿದ್ದೇನೆ. ಶೇ.50ರಷ್ಟು ಬ್ಯಾನರ್‍ಗಳು ತೆರವುಗೊಳಿಸಲಾಗಿದೆ. ಹಾಕಿರುವುದು ತಪ್ಪು. ಗ್ರೇಟರ್ ಬೆಂಗಳೂರು ಪ್ರಾಧಿಕಾರದವರು ಕೂಡಲೇ ಬ್ಯಾನರ್ ತೆಗೆಯಬೇಕೆಂದು ಸೂಚಿಸಿದ್ದೇನೆ. ಬಿಜೆಪಿಯವರು ಅವರ ನಾಯಕರುಗಳು ಬರುವುದಕ್ಕೆ ಬ್ಯಾನರ್ ಹಾಕಿದ್ದಾರೆ ಅವನ್ನು ತೆಗೆಯಲಾಗುವುದು ಎಂದು ಹೇಳಿದರು.
ಎಷ್ಟೇ ಕಠಿಣ ನಿಯಮ ತಂದರೂ ಇದನ್ನು ತಡೆಯಲು ಆಗುತ್ತಿಲ್ಲ. ದಯವಿಟ್ಟು ಬೆಂಗಳೂರು ನಗರವನ್ನು ಸ್ವಚ್ಛವಾಗಿಡಬೇಕು. ನಗರ ವ್ಯಾಪ್ತಿ ಬಿಟ್ಟು ಹಳ್ಳಿ ಭಾಗದಲ್ಲಿ ಹಾಕಿಕೊಂಡರೆ ಬೇಡ ಎನ್ನುವುದಿಲ್ಲ. ಆದರೆ ನಗರ ಭಾಗದಲ್ಲಿ ಬೇಡ. ನಾನು ಹುಟ್ಟುಹಬ್ಬದ ಸಂಭ್ರಮಾಚರಣೆ ಬೇಡ ಎಂದಿದ್ದೆ. ನಿನ್ನೆ ರಾತ್ರಿ ಅಭಿಮಾನಿಗಳು, ಕಾರ್ಯಕರ್ತರು, ನಾಯಕರು ಹಾಗೂ ಸಚಿವರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ಕಾಯುತ್ತಿದ್ದರು. ಅವರ ಪ್ರೀತಿ ವಿಶ್ವಾಸ, ಆಶೀರ್ವಾದ ಬೇಡ ಎನ್ನಲು ಆಗುವುದಿಲ್ಲ ಎಂದರು.
‘ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಕರ್ನಾಟಕಕ್ಕೆ ಕಾಲಿಡುತ್ತಿದ್ದು, ನಮಗೂ ಇದರ ಬಗ್ಗೆ ಅರಿವಿದೆ. ಪಕ್ಷದ ನಾಯಕರಿಗೆ ಇದರ ಬಗ್ಗೆ ತಿಳುವಳಿಕೆ ಮೂಡಿಸಲಾಗಿದೆ. ಎಲ್ಲ ಪಕ್ಷಗಳು ಈ ಕೆಲಸ ಮಾಡುತ್ತಿವೆ. ಬಿಜೆಪಿ, ಜನತಾದಳ ಎಲ್ಲರೂ ಅವರವರ ಮತಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ’
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ






