ಎಲ್ಲರ ಮತದಾನದ ಹಕ್ಕು ಉಳಿಸಲು ಸಂಕಲ್ಪ: ಡಿ.ಕೆ.ಶಿವಕುಮಾರ್

ಬೆಂಗಳೂರು : ‘ಯಾರು ಮತದಾನದ ಹಕ್ಕನ್ನು ಕಳೆದುಕೊಳ್ಳುವಂತಾಗಬಾರದು. ಜನರಿಗೆ ಸರಿಯಾದ ದಾಖಲೆ ಒದಗಿಸಿಕೊಟ್ಟು ಅವರ ಮತ ಕಾಪಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಹೊರವಲಯ ನಂದಿಬೆಟ್ಟ ಸಮೀಪದಲ್ಲಿ ಖಾಸಗಿ ಹೊಟೇಲ್‍ನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವತಿಯಿಂದ ಆಯೋಜಿಸಲಾಗಿದ್ದ ‘ಕಾಂಗ್ರೆಸ್ ನಡೆ, ಮತ ರಕ್ಷಣೆ ಕಡೆ’ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‍ಐಆರ್)ಪ್ರಕ್ರಿಯೆ ಎಂಬುದನ್ನು ಎಲ್ಲರೂ ತಲೆಯಿಂದ ತೆಗೆದುಹಾಕಬೇಕು.
ಬಿಎಲ್‍ಓಗಳು ನೀಡುವ ಪರಿಶೀಲನಾ ಅರ್ಜಿಯನ್ನು ಕಡ್ಡಾಯವಾಗಿ ತುಂಬಿ ದಾಖಲೆ ಸಮೇತ ಚುನಾವಣಾಧಿಕಾರಿಗಳಿಗೆ ಸಲ್ಲಿಕೆ ಮಾಡಬೇಕು. ಇದಕ್ಕಾಗಿ ನಮ್ಮ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು. ಬಿಎಲ್‍ಓಗಳು ಪಕ್ಷಬೇಧ ಮರೆತು ಸರಿಯಾದ ರೀತಿಯಲ್ಲಿ ಎಲ್ಲರ ಮತದಾನದ ಹಕ್ಕನ್ನು ರಕ್ಷಣೆ ಮಾಡಲು ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಪದಾಧಿಕಾರಿಗಳ ವಜಾ: ಸಚಿವರು, ಶಾಸಕರು ಎಲ್ಲ್ಲ ಕೆಲಸಗಳನ್ನು ಬದಿಗಿಟ್ಟು ಎಸ್‍ಐಆರ್ ಜಾಗೃತಿ ಕೆಲಸದ ಬಗ್ಗೆ ಗಮನಹರಿಸಬೇಕೆಂದು ಸೂಚಿಸಿದ್ದೇವೆ. ಸಭೆಗೆ ಗೈರಾಗಿರುವ ಪದಾಧಿಕಾರಿಗಳನ್ನು ಅವರ ಸ್ಥಾನದಿಂದ ತೆಗೆಯಲು ಪಕ್ಷದಿಂದ ನಿರ್ದೇಶನ ಬಂದಿರುವ ಹಿನ್ನೆಲೆಯಲ್ಲಿ, ಯಾರು ಇಂದಿನ ಸಭೆಗೆ ಬಂದಿಲ್ಲವೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪಕ್ಷದ ಸಂಘಟನೆಯಲ್ಲಿ ಆಸಕ್ತಿ ತೋರದವರನ್ನು ಅವರ ಸ್ಥಾನಮಾನದಿಂದ ತೆಗೆದು ಹಾಕಲಾಗುವುದು ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‍ಐಆರ್) ವಿರುದ್ಧ ಪ್ರತಿಭಟನೆಗಿಂತ, ಇದರ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಶಿವಕುಮಾರ್ ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.






