ನಾಳೆ ಸಿಎಲ್‍ಪಿ ಸಭೆ, ಹೊಸ ಸಚಿವ ಸಂಪುಟ ರಚನೆಯ ಕುರಿತು ಯಾವುದೇ ಚರ್ಚೆ ನಡೆದಿಲ್ಲ : ಡಿ.ಕೆ.ಶಿವಕುಮಾರ್

ಹೊಸದಿಲ್ಲಿ/ಬೆಂಗಳೂರು : ರಾಜ್ಯದಲ್ಲಿ ಹೊಸ ಸಚಿವ ಸಂಪುಟ ರಚನೆಯ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‍ಪಿ) ಸಭೆ ಕರೆಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚೆಗಳು ಮುಂದುವರೆದಿದ್ದು, ಪಕ್ಷದ ಎಲ್ಲ ಶಾಸಕರುಗಳಿಗೆ ಬೆಂಗಳೂರಿನಲ್ಲಿಯೇ ಇರುವಂತೆ ತಿಳಿಸಲಾಗಿದೆ. ಎಲ್ಲವೂ ಹೈಕಮಾಂಡ್ ಕೋರಿಕೆಯಂತೆ ನಡೆಯುತ್ತಿದೆ. ಏನನ್ನೂ ನಿರ್ಧರಿಸಲಾಗಿಲ್ಲ. ಶನಿವಾರ ನಾವು ಸಿಎಲ್‍ಪಿ ಸಭೆ ಕರೆದಿದ್ದೇವೆ, ನಮ್ಮ ಕೇಂದ್ರ ನಾಯಕರು ಬರಬೇಕು. ನಾವು ನಮ್ಮ ಹೈಕಮಾಂಡ್ ಜೊತೆ ಚರ್ಚಿಸಬೇಕು ಎಂದು ಸ್ಪಷ್ಟಪಡಿಸಿದರು.
ಕಾಲಿಗೆ ಬಿದ್ದು ಆರ್ಶೀವಾದ ಪಡೆದ ಡಿ.ಕೆ.ಶಿವಕುಮಾರ್: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿ.ಕೆ.ಶಿವಕುಮಾರ್ ಅವರು ಹೊಸದಿಲ್ಲಿಯಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು.ಈ ವೇಳೆ ಅವರ ಕಾಲಿಗೆ ಬಿದ್ದು ಆರ್ಶೀವಾದ ಪಡೆದರು. ಆನಂತರ, ಕಾಂಗ್ರೆಸ್ ವರಿಷ್ಠ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.




