ನನ್ನ ಅಧಿಕಾರವನ್ನು ಜನರ ಸೇವೆಗೆ ಮುಡಿಪಾಗಿಡಲು ಸಂಕಲ್ಪ ಮಾಡಿದ್ದೇನೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ಇದು ನಿಮ್ಮ ಸರಕಾರ, ನೀವು ಕೊಟ್ಟಿರುವ ಅಧಿಕಾರವನ್ನು ನಿಮ್ಮ ಸೇವೆಗಾಗಿಯೆ ಮುಡಿಪಾಗಿಡಲು ಸಂಕಲ್ಪ ಮಾಡಿದ್ದೇನೆ ಎಂದು ರಾಜ್ಯದ ಜನತೆಗೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ಮೊಟ್ಟ ಮೊದಲ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನ ನನ್ನ ಮೇಲೆ ಅಪಾರ ವಿಶ್ವಾಸ, ನಂಬಿಕೆ ಇಟ್ಟಿದ್ದಾರೆ. ಈ ಹಿಂದೆ ನನ್ನ ವಿರುದ್ಧ ಟೀಕೆಗಳು ಬಂದಿವೆ. ನನ್ನ ರಾಜಕೀಯ ಅನುಭವ ಬಳಸಿಕೊಂಡು ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಅನೇಕ ರಾಜಕೀಯ ತಂತ್ರಗಳಿಗೂ ನಾನು ಸಿಲುಕಿದ್ದೇನೆ. ತಿಹಾರ್ ಜೈಲಿಗೂ ಹೋಗಿ ಬರುವಂತಾಯಿತು. ಈ ಮುಖ್ಯಮಂತ್ರಿಯ ಕುರ್ಚಿ ನನ್ನದಲ್ಲ, ಇದು ನಾಡಿನ ಜನತೆ, ಕಾಂಗ್ರೆಸ್ ಕಾರ್ಯಕರ್ತರು ಅವರ ಸೇವೆಗಾಗಿ ನೀಡಿರುವ ಅವಕಾಶ ಎಂದು ಮುಖ್ಯಮಂತ್ರಿ ಹೇಳಿದರು.
ಶುಭ ಗಳಿಗೆ, ಶುಭ ಮುಹೂರ್ತ ಬರುತ್ತೆ ಎಂದು ಹೇಳುತ್ತಿದ್ದೆ. ಇವತ್ತು ಸಂಜೆ 4.15ಕ್ಕೆ ಆ ಶುಭ ಗಳಿಗೆ, ಮುಹೂರ್ತ ಬಂತು. ಇವತ್ತು ಹೊಸ ದಿನ, ಹೊಸ ಕೆಲಸ ಆರಂಭಿಸುವ ದಿನವಾಗಿದೆ. ಇನ್ನೆರಡು ವರ್ಷಗಳಲ್ಲಿ ಏನೆಲ್ಲ ಮಾಡಬಹುದು ಎಂಬ ಹೊಸ ಅವಕಾಶಗಳನ್ನು ಹುಡುಕುತ್ತಿದ್ದೇನೆ. ರೈತರು, ಕಾರ್ಮಿಕರು, ಯುವಕರು ಸೇರಿದಂತೆ ಎಲ್ಲ ವರ್ಗದ ಜನರಿಗಾಗಿ ಕಳೆದ 6 ತಿಂಗಳಿಂದ ಕಾರ್ಯಕ್ರಮಗಳನ್ನು ರೂಪಿಸಿದ್ದೇನೆ. ಮುಂದಿನ ದಿನಗಳಲ್ಲಿ ಅದನ್ನು ಘೋಷಣೆ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಇದು ಯುವ ಯುಗ. ಯುವಕರ ಸಮಸ್ಯೆಗಳು ಏನು? ರೈತರ ಸಮಸ್ಯೆಗಳು ಏನು? ಅವುಗಳನ್ನು ನಾವು ಯಾವ ರೀತಿ ಬಗೆಹರಿಸಬಹುದು ಎಂಬುದರ ಕುರಿತು ತಜ್ಞರ ಜೊತೆ ಚರ್ಚೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಮ್ಮ ಮುಂದೆ ದೊಡ್ಡ ಸವಾಲುಗಳಿವೆ. ರೈತರು ಉದ್ಯೋಗಕ್ಕಾಗಿ ಕೃಷಿಯಿಂದ ವಿಮುಖವಾಗಿ ನಗರ ಪ್ರದೇಶಗಳಿಗೆ ವಲಸೆ ಬರದಂತೆ ತಡೆಯಬೇಕಿದೆ. ಕೃಷಿಯನ್ನು ಸ್ವಾವಲಂಬಿಯನ್ನಾಗಿಸಬೇಕಿದೆ ಎಂದು ಶಿವಕುಮಾರ್ ಹೇಳಿದರು.






