ಕರ್ನಾಟಕದಲ್ಲಿ ಎಸ್‍ಐಆರ್ ಪ್ರಕ್ರಿಯೆ: ವಾಸ ಪ್ರಮಾಣ ಪತ್ರ ವಿತರಣೆಗೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ

ಬೆಂಗಳೂರು : ಚುನಾವಣೆ ಆಯೋಗದಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯ ಹಿನ್ನೆಲೆ ರಾಜ್ಯದಲ್ಲಿ ಯಾರಿಗೆ ವಾಸ ಪ್ರಮಾಣ ಪತ್ರವಿಲ್ಲವೋ ಅವರಿಗೆಲ್ಲಾ ಪ್ರಮಾಣ ಪತ್ರ ನೀಡಬೇಕು ಎಂದು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಎಲ್ಲ ಜಿಲ್ಲಾಧಿಕಾರಿಗಳು, ಸಿಇಓಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಮತದಾನದ ಹಕ್ಕಿಲ್ಲವಾದರೆ, ಸರಕಾರದ ಐದು ಗ್ಯಾರಂಟಿಗಳು, ಸರಕಾರದ ಪಿಂಚಣಿ ಹಾಗೂ ಇತರೆ ಸೌಲಭ್ಯಗಳು ತಲುಪುವುದಿಲ್ಲ. ಹೀಗಾಗಿ ಕಡ್ಡಾಯವಾಗಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು. ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿಗೆ ಹೋಗಬೇಕು. ಎಸ್‍ಐಆರ್ ವಿಚಾರದಲ್ಲಿ ಪ್ರತಿ ಪಂಚಾಯಿತಿ ಹಾಗೂ ಬೂತ್ ಮಟ್ಟದಲ್ಲಿ ಮಾರ್ಗದರ್ಶನ ನೀಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಎಸ್‍ಐಆರ್ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಪ್ರತಿ ತಾಲೂಕಿಗೆ ಹೋಗಿ, ಬಿಎಲ್‍ಒಗಳಿಗೆ ಮಾರ್ಗದರ್ಶನ ನೀಡಿ, ಎಲ್ಲ ಪಕ್ಷಗಳ ಬಿಎಲ್‍ಒಗಳ ಜೊತೆ ಸಂಪರ್ಕ ಇಟ್ಟುಕೊಂಡು ಜನರ ಮತದಾನದ ಹಕ್ಕು ರಕ್ಷಣೆ ಮಾಡಬೇಕು. ಮ್ಯಾಪಿಂಗ್ ಕೇವಲ ಅಧಿಕಾರಿಗಳಿಗೆ ಮಾತ್ರ. ಅದು ನಮಗೆ ಲೆಕ್ಕವಿಲ್ಲ. ನಾನು ಹಾಗೂ ನಮ್ಮ ಸಚಿವರುಗಳೂ ಸೇರಿದಂತೆ ಪ್ರತಿಯೊಬ್ಬ ಮತದಾರರು ತಮ್ಮ ಮತ ಉಳಿಸಿಕೊಳ್ಳಬೇಕಾದರೆ, ಕಡ್ಡಾಯವಾಗಿ ಬಿಎಲ್‍ಒಗಳು ನೀಡುವ ಎನ್ಯುಮರೇಷನ್ ಅರ್ಜಿಯನ್ನು ತುಂಬಿ ಸಲ್ಲಿಸಬೇಕು. ಆಗ ಮಾತ್ರ ಮತದಾನದ ಹಕ್ಕು ಉಳಿಯುತ್ತದೆ ಎಂದರು.
ಅದೇ ರೀತಿ, ಬಿಎಲ್‍ಒಗಳು ಮನೆ ಬಾಗಿಲಿಗೆ ಬಂದು ಭೇಟಿ ನೀಡುತ್ತಾರೆ. ನೀವು ಭೇಟಿಯಾಗದಿದ್ದರೆ ನೋಟೀಸ್ ಬೋರ್ಡ್‍ನಲ್ಲಿ ಪ್ರಕಟಿಸುತ್ತಾರೆ. ಇದಕ್ಕೆ ಅವಕಾಶ ನೀಡಬೇಡಿ. ಯಾರೇ ಆಗಲಿ ತಮ್ಮ ಊರಿನಿಂದ ಹೊರಗೆ ಕೆಲಸ ಮಾಡುತ್ತಿದ್ದರೆ, ಅವರ ದಾಖಲೆಗಳನ್ನು ಸಂಗ್ರಹಿಸಿ ಅರ್ಜಿ ಸಲ್ಲಿಸಬೇಕು ಎಂದು ಅವರು ವಿವರಿಸಿದರು.
‘ಮಳೆಗಾಲ ಆರಂಭವಾಗುತ್ತಿದ್ದು, ಬಿತ್ತನೆ ಕಾರ್ಯ ಶುರುವಾಗುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರ ಲಭ್ಯತೆಗೆ ಕ್ರಮವಹಿಸಬೇಕು. ಎಲ್ ನಿನೋ ಪ್ರಭಾವ ಬೀರುವ ಸಾಧ್ಯತೆ ಇದ್ದು, ಅಲ್ಪಾವಧಿ ಮಳೆ ಮುನ್ಸೂಚನೆ ಇದೆ. ಇದನ್ನು ನಿಭಾಯಿಸಲು ಕ್ರಮ ವಹಿಸಬೇಕು. ಮಳೆ ಕೊರತೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಶೇ.30ರಷ್ಟು ಮಳೆ ಕೊರತೆ ಇದ್ದು, ಮೇವಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕು’
-ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ
ತಿಂಗಳಲ್ಲಿ ಮಕ್ಕಳಿಗೆ ಸಮವಸ್ತು, ಪಠ್ಯಪುಸ್ತಕ ವಿತರಣೆ: ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಮಕ್ಕಳನ್ನು ಶಾಲೆಗೆ ಕರೆತರುವಂತೆ ಮಾಡಬೇಕು. ಎಷ್ಟು ಶಾಲೆಗಳಲ್ಲಿ ಶೂನ್ಯ ಹಾಜರಾತಿಗಳಿವೆ ಎಂಬ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು. ವಿದ್ಯಾರ್ಥಿಗಳ ಸಮವಸ್ತ್ರ, ಶೂ, ಪಠ್ಯ ಪುಸ್ತಕ ಮುಂದಿನ ಒಂದು ತಿಂಗಳಲ್ಲಿ ವಿತರಣೆಯಾಗಬೇಕು. ಶೂನ್ಯ ದಾಖಲಾತಿ 964 ಶಾಲೆಗಳಿವೆ. 1ರಿಂದ 5 ಮಕ್ಕಳ ದಾಖಲಾತಿ ಇರುವ ಶಾಲೆಗಳು 3,542 ಶಾಲೆಗಳು, 6ರಿಂದ 20 ವಿದ್ಯಾರ್ಥಿಗಳ ದಾಖಲಾತಿ ಇರುವ ಶಾಲೆಗಳ ಪ್ರಮಾಣ 12,696 ಶಾಲೆಗಳಿವೆ. 21ರಿಂದ 30 ಮಕ್ಕಳ ದಾಖಲಾತಿ ಇರುವ 4,997 ಶಾಲೆಗಳಿರುವ ಮಾಹಿತಿ ನಮ್ಮ ಬಳಿ ಇದೆ’
-ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ






