ಹಳ್ಳಿಯಿಂದ ವಿಧಾನಸೌಧವರೆಗೆ ‘0’ ಕಮಿಷನ್: ಪ್ರತಿ ಸರಕಾರಿ ಕಚೇರಿಯಲ್ಲೂ ದೂರವಾಣಿ ಸಂಖ್ಯೆ ಕಡ್ಡಾಯ: ಡಿ.ಕೆ.ಶಿವಕುಮಾರ್

ಬೆಂಗಳೂರು : ಹಳ್ಳಿಯಿಂದ ವಿಧಾನಸೌಧ ವರೆಗೆ ‘0’ (ಶೂನ್ಯ) ಕಮಿಷನ್ ವ್ಯವಸ್ಥೆ ಜಾರಿಗೊಳಿಸುವ ಗುರಿ ಇದೆ. ಅದರಂತೆ ಲಂಚ ಕೇಳುವ ಅಧಿಕಾರಿಗಳ ವಿರುದ್ಧ ದೂರು ನೀಡುವ ಸಲುವಾಗಿ ಪ್ರತಿ ಸರಕಾರಿ ಕಚೇರಿಯಲ್ಲಿಯೂ ದೂರವಾಣಿ ಸಂಖ್ಯೆ ಪ್ರದರ್ಶನ ಕಡ್ಡಾಯಗೊಳಿಸಲಾಗುವುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಎಲ್ಲ ಜಿಲ್ಲಾಧಿಕಾರಿಗಳು, ಸಿಇಓಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಸರ್ಕಾರದ ಗುರಿಯಾಗಿದೆ. ಯಾರು ತಾಲೂಕು ಹಾಗೂ ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲಿ 10 ರೂ.ಲಂಚ ನೀಡಬಾರದು. ಇದರ ವಿರುದ್ಧ ದೂರು ನೀಡಲು ಸರಕಾರಿ ಕಚೇರಿಗಳಲ್ಲಿ ದೂರವಾಣಿ ಸಂಖ್ಯೆ ಹಾಕಲಾಗಿರುತ್ತದೆ ಎಂದರು.
ಕೆಲವರು ಸುಳ್ಳು ಪ್ರಕರಣ ದಾಖಲಿಸಿ ಸುಲಿಗೆ ಮಾಡುವವರು ಇದ್ದಾರೆ. ಅದರ ಬಗ್ಗೆಯೂ ನಾವು ಪರಿಶೀಲನೆ ಮಾಡುತ್ತೇವೆ. ನಾನೇ ಆಗಲಿ, ನಮ್ಮ ಸಚಿವರುಗಳೇ ಆಗಲಿ, ಶಾಸಕರುಗಳೇ ಆಗಲಿ ಯಾವುದಾದರೂ ತಪ್ಪನ್ನು ಮಾಡು ಎಂದರೆ ಮಾತು ಕೇಳಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಯಾರಾದರೂ ಕಾನೂನು ವಿರುದ್ಧ ಕೆಲಸ ಮಾಡಲು ಒತ್ತಡ ಹಾಕಲು ಬಂದರೆ ಕೂಡಲೇ ನನಗೆ ಮಾಹಿತಿ ನೀಡಿ ಎಂದು ತಿಳಿಸಿದ್ದೇನೆ. ನಾನು ಏಕಾಏಕಿ ಎಲ್ಲವನ್ನು ಒಂದೇ ಬಾರಿಗೆ ಬದಲಿಸುತ್ತೇನೆ ಎಂದು ಹೇಳುತ್ತಿಲ್ಲ. ಈ ಪ್ರಯತ್ನದಲ್ಲಿ ನಿಮ್ಮ ಸಹಕಾರ ಬೇಕಿದೆ ಎಂದು ಮನವಿ ಮಾಡಿದ್ದೇನೆ. ನಮ್ಮ ಸರಕಾರಕ್ಕೆ ಕೆಟ್ಟ ಹೆಸರು ಬರುವಂತಹ ಕೆಲಸಕ್ಕೆ ಅವಕಾಶ ನೀಡಬೇಡಿ. ಅಧಿಕಾರಿಗಳ ವರ್ಗದಲ್ಲಿ ನಾವು ಸಾಮಾಜಿಕ ನ್ಯಾಯವನ್ನು ಪಾಲಿಸುತ್ತೇವೆ ಎಂದು ಅವರು ಹೇಳಿದರು.
ಭ್ರಷ್ಟಾಚಾರ ನಿಯಂತ್ರಿಸುವ ಕ್ರಮವನ್ನು ಮೇಲ್ವಿಚಾರಣೆ ಮಾಡುವವರು ಯಾರು ಎಂದು ಕೇಳಿದಾಗ ತಳಮಟ್ಟದಿಂದ ಸರಿಪಡಿಸಬೇಕಾಗಿದೆ. ಹಳ್ಳಿಯಿಂದ ವಿಧಾನಸೌಧದವರೆಗೆ ಅದೇ ಪದ್ಧತಿಯಲ್ಲಿ ಕೆಲಸ ಮಾಡುತ್ತೇವೆ. ಅದರಲ್ಲೂ, ಯಾವ ಕಮಿಷನ್ ಇಲ್ಲ, ‘0’(ಶೂನ್ಯ) ಕಮಿಷನ್‍ಗೆ ತರುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನಕಲಿ ಫೈನಾನ್ಸ್ ಗಳ ನಿಗ್ರಹಕ್ಕೆ ಸರಕಾರ ಮಸೂದೆ ಜಾರಿಗೆ ತಂದಿದ್ದರೂ ಇಂತಹ ಪ್ರಕರಣ ಬೆಳಕಿಗೆ ಬರುತ್ತಿದ್ದು, ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳು ತಮ್ಮ ಗುಪ್ತಚರವನ್ನು ಬಳಸಿ ಇಂತಹ ಯೋಜನೆಗಳಿಗೆ ಕಡಿವಾಣ ಹಾಕಬೇಕು ಎಂದು ಸೂಚಿಸಲಾಗಿದೆ. ಗಾಂಜಾ, ಡ್ರಗ್ಸ್ ಪ್ರಕರಣಗಳಿಗೆ ಕಡಿವಾಣ ಹಾಕಲು ಸರಕಾರ ತೀರ್ಮಾನಿಸಿದೆ. ನಮ್ಮ ಪೊಲೀಸ್ ಅಧಿಕಾರಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಾದಕ ವಸ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ವಿವರಿಸಿದರು.
ರೌಡಿಗಳನ್ನು ನಿಗ್ರಹಿಸಲು ಸೂಚನೆ
ಪ್ರತಿ ಪೊಲೀಸ್ ಠಾಣೆಯಲ್ಲಿ ಐದು ಪೊಲೀಸರ ತಂಡವನ್ನು ರಚಿಸಿ ರೌಡಿಗಳನ್ನು ನಿಗ್ರಹಿಸಲು ಸೂಚಿಸಲಾಗಿದೆ. ಸೈಬರ್ ಅಪರಾಧ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಜಿಲ್ಲಾ ಮಟ್ಟದಲ್ಲೇ ಜನರ ಸಮಸ್ಯೆ ಬಗೆಹರಿಸಿ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಜನಸಂಪರ್ಕ ಸಭೆಯಲ್ಲಿ ಭಾಗವಹಿಸಬೇಕು. ಶಾಸಕರು, ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆ ಮಾಡಬೇಕು. ಅದಕ್ಕೆ ಅಗತ್ಯವಿರುವ ಆರ್ಥಿಕ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.






