ಆ.13ರಿಂದ ಡಿಕೆಶಿ ಸರಕಾರಕ್ಕೆ ಚೊಚ್ಚಲ ಅಧಿವೇಶನ; ಸಿಎಂಗೆ ಸವಾಲುಗಳ ಸರಮಾಲೆ

ಬೆಂಗಳೂರು : ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಂಪುಟದ ಹೊಸ ಸಚಿವರಿಗೆ ಇದೇ ತಿಂಗಳ 13ರಿಂದ ಆರಂಭವಾಗಲಿರುವ ವಿಧಾನ ಮಂಡಲ ಉಭಯ ಸದನಗಳ ಮುಂಗಾರು ಅಧಿವೇಶನದ ಸವಾಲು ಎದುರಾಗಿದೆ. 10 ದಿನಗಳ ಕಾಲ ನಡೆಯಲಿರುವ ಕಲಾಪದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಒಗ್ಗಟ್ಟಿನ ಹೋರಾಟಕ್ಕೆ ರಣತಂತ್ರ ರೂಪಿಸಿವೆ.
ಸಂಪುಟ ವಿಸ್ತರಣೆ ಬೆನ್ನಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ, ಸ್ಥಾನ ಕೈತಪ್ಪಿರುವ ಆಕಾಂಕ್ಷಿ ಶಾಸಕರ ಅಸಮಾಧಾನದ ಬೇಗುದಿ ಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಹೈಕಮಾಂಡ್ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಮಧ್ಯೆ ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಆವರಿಸಿರುವ ಬರ, ಕೆಲ ಜಿಲ್ಲೆಗಳಲ್ಲಿನ ಅತಿವೃಷ್ಟಿ ಸರಕಾರದ ನಿದ್ದೆಗೆಡಿಸಿದೆ. ಈ ಸಂದರ್ಭದಲ್ಲೇ ಅಧಿವೇಶನ ಕಲಾಪವು ಜರುಗಲಿದೆ.
ರೈತರ ವಿರೋಧದ ಮಧ್ಯೆ ಕೈಗೆತ್ತಿಕೊಳ್ಳಲು ಮುಂದಾಗಿರುವ ಬಿಡದಿ ಟೌನ್‌ಶಿಪ್ ಯೋಜನೆ, ಕೆಪಿಎಸ್‌ಸಿ ನೇಮಕಾತಿ ಅಕ್ರಮ, ಬರ ಘೋಷಣೆ-ಪರಿಹಾರ ವಿತರಣೆಯಲ್ಲಿನ ವಿಳಂಬ, ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ, ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರಗೆ ಸಚಿವ ಸ್ಥಾನ ನೀಡಿರುವುದು, ಅಭಿವೃದ್ಧಿ ವಿಚಾರಗಳ ನಿರ್ಲಕ್ಷ್ಯ ಸೇರಿದಂತೆ ಸರಕಾರದ ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಅಡಕತ್ತರಿಯಲ್ಲಿ ಸಿಲುಕಿಸಲು ಪ್ರತಿಪಕ್ಷಗಳು ಸನ್ನದ್ಧವಾಗಿವೆ.
ಕೇಂದ್ರದ ಅನುದಾನ ಹಂಚಿಕೆಯಲ್ಲಿನ ತಾರತಮ್ಯ, ಮೇಕೆದಾಟು ಯೋಜನೆಗೆ ಅನುಮೋದನೆ, ಬರಕ್ಕೆ ನೆರವು ನೀಡುವಲ್ಲಿ ವಿಳಂಬ, ಆರೆಸ್ಸೆಸ್ ನೋಂದಣಿ, ನೀಟ್ ಪರೀಕ್ಷೆಯಲ್ಲಿನ ಅಕ್ರಮ, ದಿಲ್ಲಿ ವಿದ್ಯಾರ್ಥಿಗಳ ಮೇಲಿನ ಲಾಠಿ ಪ್ರಹಾರ, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಸಹಿತ ವಿಚಾರಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಜ್ಜಾಗಿದ್ದಾರೆ.
ಒತ್ತಡ ಹೇರಿ ರಾಜೀನಾಮೆ?: ರಾಜ್ಯದ ಜನತೆ ಎದುರಿಸುತ್ತಿರುವ ಬರ-ನೆರೆ ಸಂಕಷ್ಟ, ಆಡಳಿತ ವೈಫಲ್ಯ, ಭ್ರಷ್ಟಾಚಾರ ಸೇರಿದಂತೆ ಜ್ವಲಂತ ಸಮಸ್ಯೆಗಳನ್ನು ಸದನದಲ್ಲಿ ಪ್ರತಿಪಕ್ಷಗಳು ಪ್ರಸ್ತಾಪಿಸಲಿವೆ. ಇದೇ ವೇಳೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮೇಲೆ ಒತ್ತಡ ಹೇರಿ ಅವರನ್ನು ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂಬ ಆರೋಪವು ಕೇಳಿ ಬಂದಿದ್ದು, ಈ ವಿಚಾರವು ಸದನದಲ್ಲಿ ಗಂಭೀರ ಸ್ವರೂಪದ ಚರ್ಚೆಗೆ ಬರುವ ಸಾಧ್ಯತೆಗಳಿವೆ?
ಆ.13ರಂದು ಬೆಳಗ್ಗೆ 11ಗಂಟೆಗೆ ವಿಧಾನ ಮಂಡಲ ಕಲಾಪ ಆರಂಭವಾಗಲಿದ್ದು, ಮೊದಲ ದಿನ ಇತ್ತೀಚೆಗೆ ನಿಧನರಾದ ಸಚಿವ ಡಿ.ಸುಧಾಕರ್ ಸೇರಿದಂತೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದು, ಮೃತರ ಗೌರವಾರ್ಥ ಅರ್ಧದಿನದ ಕಲಾಪವನ್ನು ಮುಂದೂಡುವ ಸಾಧ್ಯತೆಗಳಿವೆ.
ಆ.14ರಂದು ಸಭಾಧ್ಯಕ್ಷ, ಉಪಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಮತ್ತು ಆ.16ರಂದು ಕಲಾಪಕ್ಕೆ ರಜೆ ಇರಲಿದೆ. ಆ.17ರಿಂದ ಅಧಿವೇಶನ ಕಲಾಪ ಕಾವೇರಲಿದ್ದು, ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.






