ಡಿಕೆಶಿ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ಪ್ರಭಾವ!

Photo : x@DKShivakumar
ಕರ್ನಾಟಕದ ಹೊಸ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಛಾಪು ಎದ್ದು ಕಾಣಿಸುತ್ತಿದೆ. ಯುಟಿ ಖಾದರ್ ಮತ್ತು ಯತೀಂದ್ರ ಸಿದ್ದರಾಮಯ್ಯ ಹೊರತುಪಡಿಸಿ ಜೂನ್ 3ರಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎಲ್ಲಾ ಶಾಸಕರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಸೇವೆ ಸಲ್ಲಿಸಿದವರೇ ಆಗಿದ್ದಾರೆ. ಮುಖ್ಯವಾಗಿ ಮಹಿಳಾ ಶಾಸಕರನ್ನು ಸಂಪುಟದಲ್ಲಿ ಸೇರಿಸಲಾಗಿಲ್ಲ.
ಆದರೆ ಜೂನ್ 3ರಂದು ಸಚಿವರಾಗಲು ಅವಕಾಶ ಸಿಗದವರೆಂದರೆ ಎಚ್ಸಿ ಮಹಾದೇವಪ್ಪ, ಎಚ್ಕೆ ಪಾಟೀಲ್, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್ ಮತ್ತು ಬಿ.ಝೆಡ್. ಝಮೀರ್ ಅಹ್ಮದ್ ಖಾನ್!
ಸಿದ್ದರಾಮಯ್ಯ ಅವರು ತಮ್ಮ ಮಗನಿಗೆ ಸಚಿವ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಜೊತೆಗೆ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಜಿ ಪರಮೇಶ್ವರ, ಬೈರತಿ ಸುರೇಶ್ ಮತ್ತು ಕೆ.ಎಚ್. ಮುನಿಯಪ್ಪ ಸೇರಿದಂತೆ ನಿಷ್ಠಾವಂತರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್ನ ಅಧ್ಯಕ್ಷರಾಗಿ ನೇಮಕಗೊಂಡ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಕೂಡ ಸಿದ್ದರಾಮಯ್ಯ ಅವರ ಆಯ್ಕೆ ಎಂದು ಹೇಳಲಾಗಿದೆ ಎಂದು thehindu.com ವರದಿ ಮಾಡಿದೆ.
ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಹುದ್ದೆಗೆ ಜಿ ಪರಮೇಶ್ವರ್ ಅವರನ್ನು ಬೆಂಬಲಿಸಿದ್ದಾರೆ ಎನ್ನಲಾಗಿದೆ. ಎಚ್ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಆರು ಬಾರಿಯ ಶಾಸಕ ಡಾ. ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿ ಎಂದು ಹಿಂದಿನಿಂದಲೂ ಪರಿಗಣಿಸಲಾಗಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪುತ್ರ ಪ್ರಿಯಾಂಕ್ ಖರ್ಗೆ ಮತ್ತು ಸೇಡಂನಿಂದ ನಾಲ್ಕು ಬಾರಿ ಶಾಸಕರಾಗಿರುವ ನಿಷ್ಠಾವಂತ ಶರಣ ಪ್ರಕಾಶ್ ಪಾಟೀಲ್ ಅವರಿಗೆ ಸಚಿವ ಸ್ಥಾನ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ವಾಲ್ಮಿಕಿ ಸಮುದಾಯದಿಂದ ಬಂದಿರುವ ಮತ್ತು ಪರಿಶಿಷ್ಟ ಪಂಗಡಗಳನ್ನು ಪ್ರತಿನಿಧಿಸುವ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಸಚಿವ ಸ್ಥಾನ ಎರಡರ ಬೇಡಿಕೆಯನ್ನು ಹೈಕಮಾಂಡ್ ತಿರಸ್ಕರಿಸಿದೆ. ಎಂಬಿ ಪಾಟೀಲ್, ಈಶ್ವರ ಖಂಡ್ರೆ ಮತ್ತು ಶರಣ್ ಪ್ರಕಾಶ್ ಪಾಟೀಲ್ ಸಂಪುಟದಲ್ಲಿ ವೀರಶೈವ-ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸಿದ್ದಾರೆ.
ಮುಖ್ಯಮಂತ್ರಿ ಒಕ್ಕಲಿಗ ಸಮುದಾಯದವರಾದ ಕಾರಣ ಐದು ಬಾರಿ ಶಾಸಕರಾಗಿರುವ ಕೃಷ್ಣ ಬೈರೇಗೌಡ ಅವರ ಸೇರ್ಪಡೆಯನ್ನು ಸಮುದಾಯ ಪ್ರಾತಿನಿಧ್ಯ ಸಮತೋಲನಗೊಳಿಸುವ ಮಾರ್ಗವೆಂದು ಪರಿಗಣಿಸಲಾಗಿದೆ. ಎಂಟು ಬಾರಿ ಶಾಸಕರಾಗಿರುವ ರಾಮಲಿಂಗ ರೆಡ್ಡಿ ಅವರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.
ಸಿದ್ದರಾಮಯ್ಯ ಅವರ ಕುರುಬ ಸಮುದಾಯಕ್ಕೆ (ಒಬಿಸಿ) ಪ್ರಾತಿನಿಧ್ಯ ಖಚಿತಪಡಿಸಿದೆ. ಬೈರತಿ ಸುರೇಶ್ ಮತ್ತು ಯತೀಂದ್ರರನ್ನು ಸೇರಿಸಿಕೊಳ್ಳಲಾಗಿದೆ. ಮತ್ತೊಂದೆಡೆ ಸಂಪುಟದಲ್ಲಿ ಸ್ಥಾನಪಡೆದ ಯು.ಟಿ. ಖಾದರ್ ಮಂಗಳೂರನ್ನು ಪ್ರತಿನಿಧಿಸಿದರೆ, ಕೆಜೆ ಜಾರ್ಜ್ ಬೆಂಗಳೂರು ಸರ್ವಜ್ಞನಗರ ಕ್ಷೇತ್ರ ಪ್ರತಿನಿಧಿಸಿದ್ದಾರೆ. ನಾಲ್ವರು ಸಚಿವರು ಬೆಂಗಳೂರು ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಯುಟಿ ಖಾದರ್ ಸಚಿವ ಸ್ಥಾನ ಪಡೆದ ನಂತರ ಸ್ಪೀಕರ್ ಹುದ್ದೆ ಖಾಲಿಯಾಗಿದೆ. ಮೂಲಗಳ ಪ್ರಕಾರ ಈ ಹುದ್ದೆಗೆ ಎಚ್ ಕೆ ಪಾಟೀಲ್, ಬಸವರಾಜ್ ರಾಯರೆಡ್ಡಿ ಮತ್ತು ಟಿಬಿ ಜಯಚಂದ್ರ ಹೆಸರುಗಳು ಕೇಳಿಬರುತ್ತಿವೆ ಎಂದು thehindu.com ವರದಿ ಮಾಡಿದೆ.






