ಜಿಲ್ಲಾವಾರು ಶಾಸಕರೊಂದಿಗೆ ದಿನವಿಡೀ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆ
ಕ್ಷೇತ್ರದ ಸಮಸ್ಯೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸುದೀರ್ಘ ಸಮಾಲೋಚನೆ: ನೆರವಿನ ಭರವಸೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿವಿಧ ಜಿಲ್ಲೆಗಳ ಪಕ್ಷದ ಶಾಸಕರೊಂದಿಗೆ ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ದಿನವಿಡೀ ಸಭೆ ನಡೆಸಿ, ಸಮಸ್ಯೆಗಳನ್ನು ಆಲಿಸಿದರು. ಅಲ್ಲದೆ, ಶಾಸಕರ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಆದ್ಯತೆಯ ವಿಷಯಗಳ ಕುರಿತು ಮಾಹಿತಿ ಪಡೆದರು.
ತಮ್ಮ ಕ್ಷೇತ್ರದ ಕುಡಿಯುವ ನೀರು, ಮೂಲಸೌಲಭ್ಯ, ವಸತಿ, ನೀರಾವರಿ ಮತ್ತಿತರ ಅಭಿವೃದ್ಧಿ ಯೋಜನೆಗಳ ಕುರಿತು ಶಾಸಕರು ಸಭೆಯಲ್ಲಿ ಚರ್ಚಿಸಿದರು. ಈ ಸಂದರ್ಭದಲ್ಲಿ ಶಾಸಕರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ನಿಮ್ಮ ಭಾವನೆಗಳನ್ನು ಅರಿತು ಸರಕಾರದ ಹಿರಿಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಒದಗಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಭಾರತ್ ಜೋಡೋ ಯುವ ಸಂಘ: ಪಂಚಾಯಿತಿ ಮಟ್ಟದಲ್ಲಿ ಭಾರತ್ ಜೋಡೋ ಯುವ ಸಂಘಗಳ ರಚನೆಗೆ ಹಾಗೂ ಅವುಗಳ ಸಕ್ರಿಯ ಕಾರ್ಯನಿರ್ವಹಣೆಗೆ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಸೂಕ್ತ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ಸೂಚಿಸಬೇಕು. ಇದು ನನ್ನ ಹಲವಾರು ವರ್ಷಗಳ ಅಧ್ಯಯನದ ಫಲ. ಈ ಯೋಜನೆಯನ್ನು ಯಶಸ್ವಿಗೊಳಿಸಲು ಎಲ್ಲ ಶಾಸಕರು ಸಹಕರಿಸುವಂತೆ ಮುಖ್ಯಮಂತ್ರಿ ಮನವಿ ಮಾಡಿದರು.
ಇದರೊಂದಿಗೆ ಪಂಚಾಯಿತಿ ಮಟ್ಟದ ಗ್ಯಾರಂಟಿ ಸಮಿತಿಗಳಿಗೆ ಆರು ಸದಸ್ಯರ ನೇಮಕ ಮಾಡುವ ಬಗ್ಗೆ ಶಾಸಕರಿಗೆ ಸಲಹೆ ನೀಡಿದರು. ಪಕ್ಷದ ಕಾರ್ಯಕರ್ತರ ರಕ್ಷಣೆ ಮಾಡುವಂತೆಯೂ ತಿಳಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಜಿಲ್ಲಾ ಅಧ್ಯಕ್ಷರಿಗೆ ಪಕ್ಷದ ಕಚೇರಿ ನಿರ್ಮಿಸಲು ಪ್ರಾರಂಭಿಸುವಂತೆ ಸೂಚಿಸಿದರು.
ಎಸ್.ಐ.ಆರ್.ನಲ್ಲಿ ಅರ್ಹ ಮತದಾರರಿಗೆ ಅನ್ಯಾಯ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಧಿಕಾರಿಗಳ ವರ್ಗಾವಣೆ ಕುರಿತಂತೆ ಐಎಎಸ್, ಐಪಿಎಸ್ ಅಧಿಕಾರಿಗಳ ವಿಷಯದಲ್ಲಿ ಹಸ್ತಕ್ಷೇಪ ಬೇಡ. ವರ್ಗಾವಣೆಯಲ್ಲಿ ಜಾತಿವಾದ ಬೇಡ. ಸಾಮಾಜಿಕ ನ್ಯಾಯ ಪಾಲಿಸುವಂತೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ. ಆದುದರಿಂದ, ವರ್ಗಾವಣೆ ಸಂದರ್ಭದಲ್ಲಿ ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಶಾಸಕರಿಗೆ ತಿಳಿಸಿದರು.
ಸತತ ಏಳು ಗಂಟೆ, 27 ಜಿಲ್ಲೆಗಳ ಶಾಸಕರೊಂದಿಗೆ ಸಭೆ: ಸತತ ಸುಮಾರು ಏಳು ಗಂಟೆಗಳ ಕಾಲ ಒಟ್ಟು 27 ಜಿಲ್ಲೆಗಳ ಪಕ್ಷದ ಶಾಸಕರೊಂದಿಗೆ ಮುಖ್ಯಮಂತ್ರಿ ಚರ್ಚೆ ನಡೆಸಿದರು. ನಾಳೆ (ಆ.26ರಂದು) ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳ ಶಾಸಕರೊಂದಿಗೆ ಸಭೆ ನಡೆಯಲಿದೆ. ಅಂತೆಯೇ ವಿಧಾನ ಪರಿಷತ್ತಿನ ಸದಸ್ಯರೊಂದಿಗೆ ಸಭೆ ನಡೆಯಲಿದೆ.






