ಡಿ.ಕೆ.ಶಿವಕುಮಾರ್ ಅಪರೂಪದ ಸಂಘಟನಾ ಸಾಮರ್ಥ್ಯ ಹೊಂದಿದ ನಾಯಕ : ಸುರ್ಜೇವಾಲ

ಬೆಂಗಳೂರು : ‘ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ, ರಾಜ್ಯದ ಜನರ ಕಲ್ಯಾಣಕ್ಕಾಗಿ, ಶಾಂತಿ, ಪ್ರಗತಿ ಮತ್ತು ಸಹೋದರತ್ವಕ್ಕಾಗಿ…ನಾವು ಒಗ್ಗಟ್ಟಾಗಿ ನಿಂತಿದ್ದೇವೆ, ಮುಂದೆಯೂ ಒಗ್ಗಟ್ಟಾಗಿಯೇ ನಿಲ್ಲುತ್ತೇವೆ’ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಆಯ್ಕೆ ಬಳಿಕ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರು, ಸಚಿವರು, ಪರಿಷತ್ ಸದಸ್ಯರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವೇ ಏಕೈಕ ಭರವಸೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಅವರು ಹೋರಾಟವೇ ಜೀವನವಾಗಿಸಿಕೊಂಡಿದ್ದು, ಕಾಂಗ್ರೆಸ್ ಸಿದ್ಧಾಂತಗಳನ್ನು ರಕ್ತದಲ್ಲಿ ಬೆರೆಸಿಕೊಂಡ ನಿಷ್ಠಾವಂತ ಕಾರ್ಯಕರ್ತ. ಅಪರೂಪದ ಸಂಘಟನಾ ಸಾಮರ್ಥ್ಯ ಹೊಂದಿದ ನಾಯಕ. ಅದಕ್ಕಿಂತಲೂ ಮುಖ್ಯವಾಗಿ, ಏಳು ಕೋಟಿ ಕನ್ನಡಿಗರ ಮೇಲಿನ ಅಪಾರ ಪ್ರೀತಿ, ಕಾಳಜಿ ಮತ್ತು ಕರುಣೆಯನ್ನು ಹೃದಯದಲ್ಲಿ ಹೊತ್ತಿರುವ ಅವರು, ಕರ್ನಾಟಕವನ್ನು ಸಮಗ್ರ ಅಭಿವೃದ್ಧಿ ಮತ್ತು ವೈಭವದ ಹೊಸ ಎತ್ತರಗಳಿಗೆ ಕೊಂಡೊಯ್ಯುವ ಮಹತ್ವಾಕಾಂಕ್ಷಿ ಕನಸನ್ನು ಹೊಂದಿದ್ದಾರೆ. ಅವರ ಎಲ್ಲ ಪ್ರಯತ್ನಗಳು ಯಶಸ್ವಿಯಾಗಲಿ ಎಂದವರು ಹಾರೈಸಿದರು.
ಸುವರ್ಣಯುಗ: ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಹಾಗೂ ಕಾಂಗ್ರೆಸ್ ಪಕ್ಷಕ್ಕಾಗಿ ಸಲ್ಲಿಸಿದ ಅಮೂಲ್ಯ ಸೇವೆಗೆ ಹೃತ್ಪೂರ್ವಕ ಧನ್ಯವಾದಗಳು. ಸಿಎಂ ಆಗಿ ಅವರು ನಿರ್ವಹಿಸಿದ ಎಂಟು ವರ್ಷಗಳ ಅವಧಿ, ದೂರದೃಷ್ಟಿಯ ನಾಯಕತ್ವ, ಸಾಮಾಜಿಕ ನ್ಯಾಯದತ್ತ ಅಚಲ ಬದ್ಧತೆ ಹಾಗೂ ಜನಕಲ್ಯಾಣ-ಅಭಿವೃದ್ಧಿಯನ್ನು ಸಮಾನವಾಗಿ ಮುನ್ನಡೆಸಿದ ಸುವರ್ಣಯುಗವಾಗಿ ಸದಾ ನೆನಪಿನಲ್ಲಿ ಉಳಿಯಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರೊಂದಿಗೆ ಕೆಲಸ ಮಾಡುವ, ಅವರ ಅನುಭವ ಮತ್ತು ನಾಯಕತ್ವದಿಂದ ಕಲಿಯುವ ಹಾಗೂ ಕಾಂಗ್ರೆಸ್‍ನ ‘ಅಭಿವೃದ್ಧಿಯೊಂದಿಗೆ ಕಲ್ಯಾಣ’ ಎಂಬ ತತ್ವವನ್ನು ಸರಕಾರದ ನೀತಿಗಳಾಗಿ ರೂಪಿಸುವ ಅವಕಾಶ ನನಗೆ ದೊರೆತಿದ್ದು ಮಹತ್ತರ ಗೌರವವಾಗಿದೆ. ಕಾಂಗ್ರೆಸ್‍ನ ಪಂಚ ಗ್ಯಾರಂಟಿಗಳನ್ನು ಜನರ ಬದುಕು ಬದಲಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಪಯಣ ಎಂದೆಂದಿಗೂ ಸ್ಮರಣೀಯ ಎಂದು ಸುರ್ಜೇವಾಲ ತಿಳಿಸಿದರು.






