‘ಸಗಣಿ ಮೇಲೆ ಕಲ್ಲನ್ನು ಹಾಕುವುದಕ್ಕೆ ಇಷ್ಟಪಡುವುದಿಲ್ಲ’ : ಯತ್ನಾಳ್ ಹೇಳಿಕೆಗೆ ಡಿ.ಕೆ.ಶಿವಕುಮಾರ್ ತೀಕ್ಷ್ಣ ಪ್ರತಿಕ್ರಿಯೆ

ಡಿ.ಕೆ.ಶಿವಕುಮಾರ್/ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು, ಆ. 31: ‘ನಾನು ಯಾವುದೇ ಕಾರಣಕ್ಕೂ ಕಸ, ಸಗಣಿ ಮೇಲೆ ಎಂದೂ ಕಲ್ಲನ್ನು ಹಾಕುವುದಕ್ಕೆ ಇಷ್ಟಪಡುವುದಿಲ್ಲ’ ಎಂದು ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧ್ಯಕ್ಷ ನಾನು. ಬಿಜೆಪಿ ಮತ್ತು ಆರೆಸ್ಸೆಸ್ಗೆ ಹೋಗುವ ಪ್ರಶ್ನೆಯೆ ಇಲ್ಲ ಎಂದು ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಹೀಗಿರುವಾಗಿ ನಾನು ‘ಒಂದು ಕಾಲು ಬಿಜೆಪಿಯಲ್ಲಿಟ್ಟಿದ್ದೇನೆ’ ಎಂಬ ಯತ್ನಾಳ್ ಹೇಳಿಕೆ ಅರ್ಥಹೀನ ಎಂದು ಪ್ರತಿಕ್ರಿಯೆ ನೀಡಿದರು.
ಯತ್ನಾಳ್ ಹೇಳಿದ್ದೇನು? :
‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ನಿಂದ ಒಂದು ಕಾಲು ಹೊರಗಿಟ್ಟಿದ್ದು, ಬಿಜೆಪಿ ಸಹಕಾರದೊಂದಿಗೆ ಸರಕಾರ ರಚಿಸಲು ಮುಂದಾಗಿದ್ದರು. ದೆಹಲಿಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ರಹಸ್ಯ ಸಭೆ ನಡೆದಿತ್ತು’ ಎಂದು ಯತ್ನಾಳ್ ಹೇಳಿದ್ದರು.
‘ಡಿ.ಕೆ.ಶಿವಕುಮಾರ್ ಈಗಾಗಲೇ ದಿಲ್ಲಿಯಲ್ಲಿ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಆದರೆ, ಅವರಿಗೆ ಶಾಸಕರ ಬೆಂಬಲ ಕಡಿಮೆ ಇದೆ ಎಂಬ ಕಾರಣಕ್ಕೆ ಅದು ಮುಂದುವರಿಯಲಿಲ್ಲ’ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದರು.
ʼಇನ್ನೊಂದೆರಡು ವರ್ಷ ಮುಸ್ಲಿಮರ ಪರ ನಿಲುವುಳ್ಳ ಸಿದ್ದರಾಮಯ್ಯ ಇದ್ದರೂ ಚಿಂತೆ ಇಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬಾರದು. ಶಿವಕುಮಾರ್ ಹಾಗೂ ವಿಜಯೇಂದ್ರ ಇಬ್ಬರೂ ಭ್ರಷ್ಟರು. ಇಬ್ಬರೂ ಒಂದಾದರೆ ಕರ್ನಾಟಕವನ್ನೇ ಮಾರಿಬಿಡುತ್ತಾರೆ’ ಎಂದಿದ್ದರು.







