ಸಿಎಂ, ಡಿಸಿಎಂ ಎಲ್ಲಾ ಗೊಂದಲಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ : ಡಿ.ಕೆ.ಸುರೇಶ್

ಹೊಸದಿಲ್ಲಿ : "ಸಿಎಂ, ಡಿಸಿಎಂ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ, ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ" ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಹೇಳಿದರು.
ಹೊಸದಿಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ಪಕ್ಷದಲ್ಲಿ ಎಲ್ಲಾ ಗೊಂದಲಗಳು ಬಗೆಹರಿದಿವೆಯೇ, ಈ ಹಿಂದೆ ನಡೆದ ಮಾತುಕತೆ ವೇಳೆ ನೀವು ಇದ್ದೀರಾ ಎನ್ನುವ ಪ್ರಶ್ನೆಗೆ, "ಇನ್ನೂ ಹೆಚ್ಚಿನದ್ದೇನಾದರೂ ಇದ್ದರೇ ಅದನ್ನು ವರಿಷ್ಠರು ಬಗೆಹರಿಸುತ್ತಾರೆ. ಈ ಬಗ್ಗೆ ಇಬ್ಬರು ನಾಯಕರು ಈಗಾಗಲೇ ಸ್ಪಷ್ಟನೆ ನೀಡಿರುವಾಗ ಹೆಚ್ಚಿನ ವ್ಯಾಖ್ಯಾನಗಳು ಬೇಡ. ಶಿವಕುಮಾರ್ ಅವರ ಮಾತು ಒಂದೇ, 140 ಶಾಸಕರು ನಮ್ಮವರೇ. ಅವರು ಪಕ್ಷದ ರಾಜ್ಯ ಅಧ್ಯಕ್ಷ ಎಂದು ಈ ಹಿಂದೆ ಹೇಳಿದ್ದಾರೆ, ಇಂದು, ನಾಳೆಯೂ ಹೇಳುತ್ತಾರೆ" ಎಂದರು.
ಸಿಎಂ- ಡಿಸಿಎಂ ಒಟ್ಟಾಗಿ ಪಕ್ಷ ಕಟ್ಟುತ್ತೇವೆ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಉಪಹಾರ ಸಭೆಯ ನಂತರ ಹೇಳಿರುವ ಬಗ್ಗೆ ಕೇಳಿದಾಗ, "ಇದು ಅವರ ಕರ್ತವ್ಯ ಕೂಡ. ರಾಜ್ಯದ ಜನರಿಗೆ ಕೊಟ್ಟ ಮಾತನ್ನು ಮುಖ್ಯಮಂತ್ರಿಯವರು ಹಾಗೂ ಉಪಮುಖ್ಯಮಂತ್ರಿಯವರು ಉಳಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ" ಎಂದರು.
ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಹಿಂದೆ ನೀಡಿದ ಹೇಳಿಕೆ ಬಗ್ಗೆ ಕೇಳಿದಾಗ, "ನಾನು ಆ ರೀತಿಯ ಹೇಳಿಕೆ ನೀಡಿಲ್ಲ. ನಾನು ಹೇಳಿದ್ದು ಬೇರೆ, ರೀತಿ ಅದನ್ನು ನೀವು (ಮಾಧ್ಯಮದವರು) ತಿರುಚಿದ್ದೀರಿ. ಆದರೂ ಸಿಎಂ ಮತ್ತು ಡಿಸಿಎಂ ಇಬ್ಬರೂ ಇಂದು ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಕಾರಣಕ್ಕೆ ಇದನ್ನು ಮತ್ತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ" ಎಂದರು.
ಸೋನಿಯಾ ಗಾಂಧಿ ಅವರ ತ್ಯಾಗದ ಬಗ್ಗೆ ಹಿಂದೆಯೂ ತಿಳಿಸಿದ್ದಾರೆ :
ಸೋನಿಯಾಗಾಂಧಿ ಅವರ ತ್ಯಾಗದ ಬಗ್ಗೆ ಸಿಎಂ ಸಮ್ಮುಖದಲ್ಲೇ ಶಿವಕುಮಾರ್ ಅವರು ಹೇಳಿದ ಬಗ್ಗೆ ಕೇಳಿದಾಗ, "ಡಿಸಿಎಂ ಅವರು, ನೆಹರು ಅವರ ಕುಟುಂಬದ ತ್ಯಾಗ, ಬಲಿದಾನದ ಬಗ್ಗೆ ಯಾವಾಗಲೂ ಹೇಳುತ್ತಿರುತ್ತಾರೆ. ಈ ಸಂದರ್ಭದಲ್ಲಿ ಮಾತ್ರವಲ್ಲ, ಸೋನಿಯಾ ಗಾಂಧಿಯವರ ತ್ಯಾಗದ ಬಗ್ಗೆ ಹೃದಯದಿಂದ ತಿಳಿಸುವ ಕೆಲಸವನ್ನು ಕಾರ್ಯಕರ್ತರಿಗೆ, ಮುಖಂಡರಿಗೆ ಈ ಹಿಂದೆಯೂ ಮಾಡಿದ್ದಾರೆ. ಇದೇನು ಹೊಸದಲ್ಲ" ಎಂದು ಹೇಳಿದರು.
ಹೈಕಮಾಂಡ್ ಮಟ್ಟದಲ್ಲಿ ಸಭೆ ಬಗ್ಗೆ ಕೇಳಿದಾಗ, "ಹೈಕಮಾಂಡ್ ನವರು ಪ್ರತಿದಿನ ಸಭೆ ಸೇರುತ್ತಿರುತ್ತಾರೆ. ರಾಷ್ಟ್ರಮಟ್ಟದ ವಿಚಾರ, ಸಂಘಟನೆ, ರಾಜ್ಯಗಳ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಲೇ ಇರುತ್ತಾರೆ. ಲೋಕಸಭಾ ಅಧಿವೇಶನ ಸೋಮವಾರದಿಂದ ಪ್ರಾರಂಭ ಆಗುತ್ತಿರುವುದರಿಂದ ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿಹಿಡಿಯಲು ಸಭೆ ಸೇರಬೇಕಾಗುತ್ತದೆ. ಚರ್ಚೆ ನಡೆಸಬೇಕಾದ ವಿಚಾರಗಳ ಬಗ್ಗೆ ತಿಳಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ಸಭೆ ಸಹಜ"ಎಂದು ಹೇಳಿದರು.
ಶಿವಕುಮಾರ್ ಅವರ ಶ್ರಮಕ್ಕೆ ಪಕ್ಷ ಕೂಲಿ ನೀಡುತ್ತದೆಯೇ ಎಂದು ಕೇಳಿದಾಗ, "ಕೆಪಿಸಿಸಿ ಅಧ್ಯಕ್ಷ ಸ್ಥಾನ, ಉಪಮುಖ್ಯಮಂತ್ರಿ ಹುದ್ದೆ ಇದೆಲ್ಲವೂ ಪಕ್ಷ ನೀಡಿರುವ ಹುದ್ದೆಯೇ. ಆದ ಕಾರಣ ಇದರ ಬಗ್ಗೆ ಮತ್ತೆ ಮಾತನಾಡುವುದು ಸೂಕ್ತವಲ್ಲ" ಎಂದರು.







