ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗುತ್ತಾರೆ : ಡಿ.ಕೆ.ಸುರೇಶ್

ಡಿ.ಕೆ. ಸುರೇಶ್
ಬೆಂಗಳೂರು, ಫೆ.28: "ಹಣೆ ಬರಹದಲ್ಲಿ ಬರೆದಿದ್ದರೆ ಅಣ್ಣ(ಡಿ.ಕೆ.ಶಿವಕುಮಾರ್) ಸಿಎಂ ಆಗುತ್ತಾರೆ. ಹಣೆ ಬರಹದಲ್ಲಿ ಇಲ್ಲ ಎಂದರೆ ಯಾರೂ ಏನೂ ಮಾಡಲು ಆಗುವುದಿಲ್ಲ" ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ನೀವು ಶಸ್ತ್ರತ್ಯಾಗ ಮಾಡಿದ್ದೀರಾ ಎಂದು ಕೇಳಿದಾಗ, "ತ್ಯಾಗ ಮಾಡಲು ಶಸ್ತ್ರ ಇರಬೇಕಲ್ಲವೇ? ಶಸ್ತ್ರವೇ ಇಲ್ಲವಲ್ಲ. ಶಸ್ತ್ರ ಇದೆ ಎಂದು ನಾನು ಯಾವಾಗ ಹೇಳಿದ್ದೆ. ಶಸ್ತ್ರವೇ ಇಲ್ಲದಿದ್ದಾಗ ಶಸ್ತ್ರತ್ಯಾಗದ ಪ್ರಶ್ನೆಯೇ ಬಾರದು" ಎಂದು ಕೇಳಿದರು.
ಶಾಸಕರ ದೆಹಲಿ ಯಾತ್ರೆ ವಿಚಾರ ನನಗೆ ಗೊತ್ತಿಲ್ಲ :
ಶಾಸಕರು ದೆಹಲಿಗೆ ತೆರಳಿ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ನಾಯಕರನ್ನು ಕೇಳುವ ಬಗ್ಗೆ ಪ್ರಶ್ನಿಸಿದಾಗ, "ಶಾಸಕರು ದೆಹಲಿಗೆ ಹೋಗುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಶಾಸಕರನ್ನೇ ಕೇಳಿ" ಎಂದರು.
ಭೋಜನಕೂಟ ಸೇರಿದ ಶಾಸಕರು ನಾಯಕತ್ವದ ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ ಎಂದಾಗ, "ನಾನು ಊರಲ್ಲಿ ಇರಲಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅವರು ಯಾವ ತೀರ್ಮಾನ ಕೈಗೊಂಡಿದ್ದಾರೆ, ಯಾವ ಹೇಳಿಕೆ ಕೊಟ್ಟಿದ್ದಾರೆ ಎಂಬುದೂ ಗೊತ್ತಿಲ್ಲ. ಇದು ಅವರ ವೈಯಕ್ತಿಕ ವಿಚಾರ. ಪಕ್ಷ ಅದನ್ನು ಗಮನಿಸಲಿದೆ" ಎಂದು ತಿಳಿಸಿದರು.
ಶಾಸಕರ ಆಗ್ರಹದಲ್ಲಿ ನ್ಯಾಯ ಇದೆ ಅಲ್ಲವೇ ಎಂದು ಕೇಳಿದಾಗ, "ಶಾಸಕರ ವಿಚಾರಧಾರೆ ಅವರಿಗೆ ಹಾಗೂ ಸಂಬಂಧಿಸಿದ್ದೇ ಹೊರತು, ನನಗಲ್ಲ. ಪಕ್ಷ ಅವರ ವಿಚಾರಗಳನ್ನು ಗಮನಿಸಲಿದೆ. ನಾವು ಆ ವಿಚಾರದಲ್ಲಿ ಹೇಳಲು ಬರುವುದಿಲ್ಲ" ಎಂದರು.
ಪಕ್ಷದಿಂದ ಕೆಎಂಎಫ್ ಚುನಾವಣೆ ಅಭ್ಯರ್ಥಿ ಆಯ್ಕೆ :
ಮಾರ್ಚ್ 6 ರಂದು ಕೆಎಂಎಫ್ ಚುನಾವಣೆ ನಡೆಯಲಿದೆಯೇ ಎಂದು ಕೇಳಿದಾಗ, "ಚುನಾವಣೆ ಯಾವಾಗ ಮಾಡಬೇಕು ಎಂದು ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಆಗ ಪಕ್ಷ ತೀರ್ಮಾನ ಮಾಡುವ ವ್ಯಕ್ತಿಯೇ ಸ್ಪರ್ಧೆ ಮಾಡಲಿದ್ದಾರೆ" ಎಂದರು.
ನೀವು ಕೆಎಂಎಫ್ ಚುನಾವಣೆ ಆಕಾಂಕ್ಷಿ ಎಂದಾಗ, "ನಾನು ಯಾವುದಕ್ಕೂ ಆಕಾಂಕ್ಷಿ ಅಲ್ಲ" ಎಂದರು.
ಕೊಟ್ಟ ಗ್ಯಾರಂಟಿ ವಾಗ್ದಾನ ಉಳಿಸಿಕೊಳ್ಳಬೇಕು :
ಗ್ಯಾರಂಟಿ ಯೋಜನೆಗಳಿಗೆ 1.20 ಲಕ್ಷ ಕೋಟಿ ಖರ್ಚಾಗಿದೆ ಎಂದು ಕೇಳಿದಾಗ, "ಗ್ಯಾರಂಟಿಯು ರಾಜ್ಯದ ಜನತೆಗೆ ಕೊಟ್ಟ ನಮ್ಮ ವಾಗ್ದಾನ. ನಾವು ಅದರಂತೆ ನಡೆಯಬೇಕು. ಪಕ್ಷದ ಅಧ್ಯಕ್ಷರು, ಸಿಎಂ ಸೇರಿದಂತೆ ಚುನಾವಣೆ ಎದುರಿಸಿದ ಎಲ್ಲರೂ ಗ್ಯಾರಂಟಿ ನೀಡುವುದಾಗಿ ಹೇಳಿದ್ದಾರೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು" ಎಂದರು.
ಗ್ಯಾರಂಟಿಗಳು ಹೊರೆ ಎಂಬ ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಹೊರೆಯಾದರೂ ಆಗಲಿ, ಬೇರೆಯಾದರೂ ಆಗಲಿ. ಮಾತು ಕೊಡುವ ಮುನ್ನ ಚಿಂತನೆ ಮಾಡಬೇಕಿತ್ತು. ಮಾತು ಕೊಟ್ಟಾಗಿದೆ. ಅದರಂತೆ ನಡೆಯಬೇಕು. ಐದು ವರ್ಷಗಳ ಕಾಲ ಎಷ್ಟೇ ಕಷ್ಟ ಆದರೂ ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಕೊಡಬೇಕು. ಅದು ನಮ್ಮ ನಂಬಿಕೆ" ಎಂದು ತಿಳಿಸಿದರು.
ಸಿರಿವಂತರು ಗ್ಯಾರಂಟಿ ಯೋಜನೆ ತೆಗೆದುಕೊಳ್ಳುವುದು ಬೇಡ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, "ಸಿರಿವಂತರು ಇದನ್ನು ಪಡೆಯುತ್ತಿದ್ದರೆ ಅದು ತಪ್ಪು. ಬಡವರಿಗಾಗಿ ಗ್ಯಾರಂಟಿ ಯೋಜನೆ ತರಲಾಗಿದೆ. ಈ ಯೋಜನೆ ಎಲ್ಲರೂ ಬಳಸುತ್ತಿರುವ ಬಗ್ಗೆ ಕೆಲವರು ಮಾತನಾಡಿರಬಹುದು. ನಾವು ಕೊಟ್ಟಿರುವ ವಾಗ್ದಾನವನ್ನು ಅನುಷ್ಠಾನ ಮಾಡಲಾಗಿದ್ದು, ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಹಿಂದೆ ಸರಿದರೆ ಮಾತಿಗೆ ತಪ್ಪಿದಂತೆ ಆಗುತ್ತದೆ" ಎಂದರು.






