ಸಿಎಂ, ಡಿಸಿಎಂ ಇಬ್ಬರು ಪಕ್ಷದ ನಾಯಕತ್ವಕ್ಕೆ ಬದ್ದ : ಡಿ.ಕೆ.ಸುರೇಶ್

ಡಿ.ಕೆ.ಸುರೇಶ್
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಟ್ಟಾಗಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಇಬ್ಬರೂ ಪಕ್ಷದಲ್ಲಿದ್ದು ಸಿದ್ಧಾಂತ-ನಾಯಕತ್ವಕ್ಕೆ ಬದ್ಧರಾಗಿದ್ದಾರೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಬ್ಬರು ನಾಯಕರೂ ಒಗ್ಗಟ್ಟು ಪ್ರದರ್ಶಿಸುತ್ತಿರುವ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ ಇಬ್ಬರೂ ನಾಯಕರು ಒಟ್ಟಾಗಿಯೇ ಕೆಲಸ ಮಾಡುತ್ತಿದ್ದಾರೆ. ಈ ಮೊದಲು ವಿಪಕ್ಷದಲ್ಲಿ ಇದ್ದಾಗಿನಿಂದಲೂ ಜೊತೆಯಾಗಿಯೇ ಕೆಲಸ ಮಾಡಿದ್ದಾರೆ, ಚುನಾವಣೆಗಳಲ್ಲಿ ಒಟ್ಟಾಗಿ ದುಡಿದಿದ್ದಾರೆ ಎಂದರು.
ತಾವು ಮತ್ತು ಡಿ.ಕೆ.ಶಿವಕುಮಾರ್ ಹಾಲು-ಜೇನಿನಂತೆ ಇದ್ದೇವೆಂದು ಸಿದ್ದರಾಮಯ್ಯ ಹೇಳಿರುವ ಬಗ್ಗೆ ನನಗೆ ಗೊತ್ತಿಲ್ಲ. ಹಾಲು ಬೇಕಾದರೆ ಡೈರಿ ಸರ್ಕಲ್ಗೆ ಬನ್ನಿ. ಜೇನಿನ ಬಗ್ಗೆ ನನಗೆ ಮಾಹಿತಿಯಿಲ್ಲ. ಅದು ಕೊಡಗು ಹಾಗೂ ಮಳೆನಾಡು ಭಾಗದಲ್ಲಿ ದೊರೆಯುತ್ತದೆ. ಮೈಸೂರು ಪಾಕ್ ಅಥವಾ ಇನ್ಯಾವುದಾದರೂ ಸಿಹಿ ಬೇಕಾದರೆ ಕೆಎಂಎಫ್ಗೆ ಬನ್ನಿ ತಿನ್ನಿಸುತ್ತೇನೆ ಎಂದು ನುಡಿದರು.




