ಬಿಡದಿ ಟೌನ್ಶಿಪ್ ಯೋಜನೆ ಬಗ್ಗೆ ಡಿ.ಕೆ.ಶಿವಕುಮಾರ್ 2007ರಲ್ಲಿಯೇ ವಿರೋಧ ವ್ಯಕ್ತಪಡಿಸಿದ್ದರು: ಎಚ್.ಡಿ. ಕುಮಾರಸ್ವಾಮಿ

ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆ ಬಗ್ಗೆ ರಾಜ್ಯದ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 2007ರಲ್ಲಿಯೇ ವಿರೋಧ ವ್ಯಕ್ತಪಡಿಸಿದಲ್ಲದೆ, ಅಂದು ವಿಧಾನಸಭೆ ಕಲಾಪದಲ್ಲಿ ಹೇಳಿದ್ದ ಮಾತುಗಳು ಇಂದು ಜೀವಂತವಾಗಿವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 500 ದಿನಗಳಿಂದ ಪ್ರತಿಭಟನೆ ಮಾಡುತ್ತಿರುವವರು ಅಸಲಿ ರೈತರಲ್ಲ ಎನ್ನುತ್ತಿರುವ ಡಿ.ಕೆ.ಶಿವಕುಮಾರ್ ಅವರ ನಡೆ ಖಂಡನೀಯ. ಅಲ್ಲಿ ಕೂತಿರುವವರು ಅಸಲಿ ರೈತರೋ ಅಥವಾ ನಕಲಿ ರೈತರೋ ಎಂಬುದು ನಿಮಗೆ ತಿಳಿಯಲು ಸ್ಥಳಕ್ಕೆ ಬನ್ನಿ ಎಂದು ಸವಾಲು ಹಾಕಿದರು.
ರಿಯಲ್ ಎಸ್ಟೇಟ್ ದುರಾಸೆಯಿಂದ ಮುಗ್ಧ ರೈತರಿಂದ ಫಲವತ್ತಾದ ಭೂಮಿಯನ್ನು ಕಸಿದುಕೊಂಡು ದಂಧೆಕೋರರಿಗೆ ನೀಡಲು ಬ್ರೋಕರ್ ಕೆಲಸ ಮಾಡುತ್ತಿರುವ ಈ ಸರಕಾರದ ನೇತೃತ್ವ ವಹಿಸಿರುವ ನಾಯಕರು ಇದೇ ಬಿಡದಿ ಟೌನ್ಶಿಪ್ ಯೋಜನೆ ಬಗ್ಗೆ ವಿಧಾನ ಕಲಾಪದಲ್ಲಿಯೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅವರಲ್ಲಿ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಮುಖರು. ಈಗ ನೋಡಿದರೆ ಟೌನ್ಶಿಪ್ ಯೋಜನೆಯನ್ನು ಕಾರ್ಯಗತ ಮಾಡಿಯೇ ತೀರುತ್ತೇನೆ ಎಂದು ರಿಯಲ್ ಎಸ್ಟೇಟ್ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ಬಿಡದಿ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಅಂದು ದೊಡ್ಡ ಗಂಟಲಿನಲ್ಲಿ ವಿರೋಧಿಸಿದವರು ಇಂದು ಯೋಜನೆಯ ಪರವಾಗಿ ಮಾತಾಡುತ್ತಿದ್ದಾರೆ. ಪ್ರಮುಖವಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅವರು ಹಾಲಿ ಮುಖ್ಯಮಂತ್ರಿ ನಡೆಸುತ್ತಿರುವ ಅಕ್ರಮಗಳನ್ನು ನೋಡಿಕೊಂಡು ಜಾಣಮೌನ ವಹಿಸಿದ್ದಾರೆ ಎಂದು ಅವರು ಹೇಳಿದರು.
ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡಲು ಬಿಡದಿ ಸೇರಿದಂತೆ ಐದು ಟೌನ್ಶಿಪ್ಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು ನಾನೇ. 2009ರಲ್ಲಿ ಟೌನ್ಶಿಪ್ ಯೋಜನೆ ಬಗ್ಗೆ ತೀರ್ಮಾನ ಮಾಡಲಾಯಿತು. ಆನಂತರ ಯೋಜನೆಗೆ ಸರಕಾರದ ವತಿಯಿಂದ ಅಧಿಸೂಚನೆ ಹೊರಡಿಸಲಾಯಿತು. ಅಂದು ನಾನು ಈ ಯೋಜನೆಯ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆಯೇ ರೈತರು, ಬಡವರು, ಫಲವತ್ತಾದ ಭೂಮಿ, ಅರಣ್ಯ ಪ್ರದೇಶ, ಮರಗಳು ಇತ್ಯಾದಿ ಅಂಶಗಳನ್ನು ಮುಂದಕ್ಕೆ ತಂದು ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರು ನನ್ನ ಮೇಲೆ ದೊಡ್ಡ ಯುದ್ಧವನ್ನೇ ಮಾಡಿದ್ದರು ಎಂದು ಅವರು ತಿಳಿಸಿದರು.
ಅಂದು ವೀರಾವೇಷದ ಮಾತುಗಳನ್ನು ಆಡಿದ್ದ ಕಾಂಗ್ರೆಸ್ ನಾಯಕರು, ಹಿರಿಯ ನಾಯಕ ಎಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯನ್ನು ರಚಿಸಿದ್ದರು. ಸಮಿತಿಯು ಬಿಡದಿ, ಸೋಲೂರು, ಕಸಬಾ, ಹೊಸಕೋಟೆ ಮುಂತಾದ ಕಡೆಗಳಿಗೆ ಹೋಗಿ ಸತ್ಯಶೋಧನೆ ನಡೆಸಿತ್ತು. ಆದರೆ ಎಚ್.ಕೆ.ಪಾಟೀಲ್ ಅವರು ಸತ್ಯಶೋಧನಾ ವರದಿಯನ್ನು ಏನು ಮಾಡಿದರು ಎಂಬುದೇ ಯಕ್ಷಪ್ರಶ್ನೆ. ವಿಚಿತ್ರವೆಂದರೆ, ಆ ವರದಿಯ ಬಗ್ಗೆ ಮತ್ತು ಕಾಂಗ್ರೆಸ್ ನಾಯಕರ ದ್ವಂದ್ವ ನಿಲುವುಗಳ ಬಗ್ಗೆ ಸದನದಲ್ಲಿ ಸುಮಾರು ಮೂರು ದಿನಗಳಿಗೂ ಹೆಚ್ಚು ಕಾಲ ಚರ್ಚೆ ನಡೆಯಿತು ಎಂದು ಸಚಿವರು ಮಾಹಿತಿ ನೀಡಿದರು.
ಅಸೆಂಬ್ಲಿಯಲ್ಲಿ ನಿಯಮ 69ರ ಅಡಿಯಲ್ಲಿ ಚರ್ಚೆ ನಡೆದಿದ್ದ ಸಂದರ್ಭದಲ್ಲಿ 2007 ಆಗಸ್ಟ್ 1ರಂದು ಡಿ.ಕೆ.ಶಿವಕುಮಾರ್ ಉದ್ದುದ್ದ ಭಾಷಣ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಸರಕಾರ ನಡೆಸುತ್ತಿರುವ ರೈತ ವಿರೋಧಿ ಭೂ ಮಾರಣಹೋಮವನ್ನು ತಡೆಯಲು ವಿಫಲರಾಗಿರುವುದು ಸರಿಯಲ್ಲ ಎಂದು ಅವರು ಹೇಳಿದರು.






