ರಮೇಶ್ ಜಾರಕಿಹೊಳಿ ನಿವಾಸದ ಮುಂದೆ ಅವಾಚ್ಯ ಶಬ್ದಗಳ ಬರಹವಿರುವ ಪೋಸ್ಟರ್ ಅಂಟಿಸಿದ ಡಿಕೆಶಿ ಬೆಂಬಲಿಗರು

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಪತ್ರಿಕಾಗೋಷ್ಠಿ ನಡೆಸಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, ಡಿಕೆಶಿ ಬೆಂಬಲಿಗರು ರಮೇಶ್ ಜಾರಕಿಹೊಳಿ ಅವರ ನಿವಾಸದ ಮುಂದೆ ಪೋಸ್ಟರ್ ಗಳನ್ನು ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.
ಸೋಮವಾರ ತಡರಾತ್ರಿ ರಮೇಶ್ ಜಾರಕಿಹೊಳಿ ಅವರ ಬೆಂಗಳೂರಿನ ಸದಾಶಿವನಗರದ ನಿವಾಸದ ಮುಂದೆ ಅವಾಚ್ಯ ಪದ ಬಳಕೆ ಮಾಡಿರುವ ಪೋಸ್ಟರ್ ಗಳನ್ನು ಕಿಡಿಗೇಡಿಗಳು ಅಂಟಿಸಿ ಹೋಗಿದ್ದಾರೆ.
ರಮೇಶ್ ಜಾರಕಿಹೊಳಿ ಮನೆ ಗೋಡೆಗೆ ಅಶ್ಲೀಲ ಬರಹಗಳ ಪೋಸ್ಟರ್ ಅಂಟಿಸಿದ ವಿಚಾರ ಗೊತ್ತಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಕೂಡಲೇ ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದಾರೆ. ಸ್ಥಳಕ್ಕೆ ಶೇಷಾದ್ರಿಪುರ ಉಪ ವಿಭಾಗ ಎಸಿಪಿ ಪ್ರಕಾಶ್ ಬೇಟಿ ಪರಿಶೀಲಿಸಿದ್ದು, ಮುಂಜಾಗ್ರತಾ ಕ್ರಮವಾಗಿ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಬಿಗಿಭದ್ರತೆ ಕಲ್ಪಿಸಲಾಗಿದೆ.
ʼʼಡಿಕೆ ಶಿವಕುಮಾರ್ ಒಬ್ಬ ಪುಕ್ಕಲ, ಮೋಸಗಾರ, ಸಿಡಿ ಮಾಸ್ಟರ್ʼʼ ಎಂದೆಲ್ಲಾ ರಮೇಶ್ ಜಾರಕಿಹೊಳಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.





