2028ರಲ್ಲಿ ಡಿಕೆಶಿ ನಾಯಕತ್ವ, ಸಿದ್ದರಾಮಯ್ಯ ಸಹಕಾರದಿಂದ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರಲಿದೆ : ಕೆ.ಸಿ.ವೇಣುಗೋಪಾಲ್

ಬೆಂಗಳೂರು : ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ನಾಯಕತ್ವ ಹಾಗೂ ಸಿದ್ದರಾಮಯ್ಯ ಸಹಕಾರದೊಂದಿಗೆ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಪುನಃ ಅಧಿಕಾರಕ್ಕೆ ಬರಲಿದೆ ಎಂದು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಸಲಹೆ ಮೇರೆಗೆ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಹೆಸರನ್ನು ಸಿದ್ದರಾಮಯ್ಯ ಪ್ರಸ್ತಾವಿಸಿದರು, ಡಾ.ಜಿ.ಪರಮೇಶ್ವರ್ ಅನುಮೋದಿಸಿದರು ಎಂದರು.
ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ತಂಡದೊಂದಿಗೆ ಜೂ.3ರಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಧಿಕಾರ ಹಸ್ತಾಂತರ ತುಂಬಾ ಕ್ಲಿಷ್ಟಕರವಾಗಿರುತ್ತದೆ. ರಾಜ್ಯ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ ಆಗುತ್ತದೆ. ಸಿದ್ದರಾಮಯ್ಯನವರ ಮುಂದಿನ ನಡೆ ಏನಾಗಬಹುದು ಎಂಬ ಚರ್ಚೆಗಳು ನಡೆಯುತ್ತಿದ್ದವು ಎಂದು ವೇಣುಗೋಪಾಲ್ ಹೇಳಿದರು.
ಆದರೆ, ಕಾಂಗ್ರೆಸ್ ಒಂದು ಕುಟುಂಬ. ಹೈಕಮಾಂಡ್ ಆದೇಶಕ್ಕೆ ಬದ್ಧ ಎಂದು ಹೇಳಿದ್ದ ಸಿದ್ದರಾಮಯ್ಯ ಅದನ್ನು ಸಾಬೀತು ಮಾಡುವ ಮೂಲಕ ಸ್ಪಷ್ಟ ಸಂದೇಶ ನೀಡಿದ್ದಾರೆ. ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಹೆಸರನ್ನು ಸಿದ್ದರಾಮಯ್ಯ ಸೂಚಿಸಿದರು. ಅದೇ ಮತ್ತೊಂದೆಡೆ ಸಿದ್ದರಾಮಯ್ಯನವರ ಎಂಟು ವರ್ಷಗಳ ಅಧಿಕಾರ ಅವಧಿಯನ್ನು ಶ್ಲಾಘಿಸುವ, ಕೃತಜ್ಞತೆ ಸಲ್ಲಿಸುವ ನಿರ್ಣಯವನ್ನು ಡಿ.ಕೆ.ಶಿವಕುಮಾರ್ ಮಂಡಿಸಿದರು. ಈ ಎರಡು ನಿರ್ಣಯಗಳಿಗೆ ಶಾಸಕಾಂಗ ಪಕ್ಷ ಸರ್ವಾನುಮತದ ಒಪ್ಪಿಗೆ ನೀಡಿತು ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಹೆಮ್ಮೆಯ ಕ್ಷಣ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನಾಯಕತ್ವದಲ್ಲಿ ಈ ಅಧಿಕಾರ ಹಸ್ತಾಂತರ ಆಗಿದೆ. ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಸಿದ್ದರಾಮಯ್ಯ ಸಹಕಾರದೊಂದಿಗೆ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವೇಣುಗೋಪಾಲ್ ಹೇಳಿದರು.






