ಚುನಾವಣೆಯಲ್ಲಿ ಅಕ್ರಮಗಳಾಗಿವೆ ಎನ್ನುತ್ತಿದ್ದಂತೆ ಬಿಜೆಪಿಯವರು ಭಯ ಬೀಳುತ್ತಿದ್ದಾರೆ : ಡಿ.ಕೆ.ಸುರೇಶ್

ಡಿ.ಕೆ.ಸುರೇಶ್
ಬೆಂಗಳೂರು : ಕೇಂದ್ರ ಚುನಾವಣಾ ಆಯೋಗದ ಕುರಿತು ಹೇಳಿಕೆ ನೀಡಿದರೆ ಬಿಜೆಪಿ ಆಯೋಗದ ಪರ ನಿಂತು ಸಮರ್ಥಿಸಿಕೊಳ್ಳುತ್ತಿರುವುದೇಕೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರಶ್ನೆ ಮಾಡಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಅಕ್ರಮಗಳಾಗಿವೆ ಎನ್ನುತ್ತಿದ್ದಂತೆ ಬಿಜೆಪಿಯವರು ಭಯ ಬೀಳುತ್ತಿದ್ದಾರೆ. ಮತ ಕಳ್ಳತನದ ಬಗ್ಗೆ ಈ ಹಿಂದೆ ಕರ್ನಾಟಕದಲ್ಲಿ ಸಾಕಷ್ಟು ದೂರು ದಾಖಲಾಗಿದ್ದವು. ಚಿಲುಮೆ ಸಂಸ್ಥೆಯ ಅಕ್ರಮಗಳ ಬಗ್ಗೆ ಬಿಜೆಪಿಯ ಅವಧಿಯಲ್ಲೇ ಪ್ರಕರಣ ದಾಖಲಾಗಿತ್ತು. ಇವುಗಳನ್ನು ಮುಂದಿಟ್ಟುಕೊಂಡೇ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ. ಅಕ್ರಮಗಳ ಬಗ್ಗೆ ಎಷ್ಟು ದೂರು ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ. ಪ್ರತಿ ಬಾರಿಯೂ ಕೇಂದ್ರ ಸರಕಾರದ ಅಣತಿಯಂತೆ ವರ್ತಿಸುತ್ತಿದೆ ಎಂದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆಯೋಗದಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ಕೊಟ್ಟಿಲ್ಲ. ಆದರೆ, ಈಗಿನ ಕೇಂದ್ರ ಸರಕಾರ ಎಲ್ಲ ತನಿಖಾ ಸಂಸ್ಥೆಗಳ ಮೇಲೆ ಪ್ರಭಾವ ಸಾಧಿಸುತ್ತಿದೆ ಎನ್ನುವ ಆರೋಪ ನಿತ್ಯ ಕೇಳಿಬರುತ್ತಿದೆ ಎಂದು ಹೇಳಿದರು.





