ಎಸ್‍ಸಿ, ಎಸ್‍ಟಿ, ಒಬಿಸಿ ಬಗ್ಗೆ ಕಾಂಗ್ರೆಸ್ಸಿಗೆ ಪ್ರಾಮಾಣಿಕ ಕಾಳಜಿ ಇದೆಯೇ?: ಬಿ.ವೈ. ವಿಜಯೇಂದ್ರ
"ಮಲ್ಲಿಕಾರ್ಜುನ ಖರ್ಗೆಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ"

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಈ ದೇಶದ ಹಿಂದುಳಿದ ವರ್ಗಗಳ ಬಗ್ಗೆ, ಪರಿಶಿಷ್ಟ ಜಾತಿ, ಪಂಗಡಗಳ ಬಗ್ಗೆ, ಅಲ್ಪಸಂಖ್ಯಾತರ ಕುರಿತು ಪ್ರಾಮಾಣಿಕ ಕಾಳಜಿ ಇದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಪ್ರಶ್ನಿಸಲು ಬಯಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬುಧವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ತಮ್ಮನ್ನು ತಾವು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಕರೆದುಕೊಳ್ಳುತ್ತಾರೆ. ರಾಹುಲ್ ಗಾಂಧಿ ಆದೇಶ ಮಾಡಿದ್ದಾರೆಂದು 165 ಕೋಟಿ ರೂ. ಖರ್ಚು ಮಾಡಿ ಸಿದ್ಧಪಡಿಸಿದ್ದ ಕಾಂತರಾಜು ವರದಿಯನ್ನು ಕಸದ ಬುಟ್ಟಿಗೆ ಹಾಕಿದ್ದೀರಲ್ಲವೇ? ಎಲ್ಲಿ ಹೋಯಿತು ನಿಮ್ಮ ಹಿಂದುಳಿದವರ ಪರವಾದ ಕಾಳಜಿ ಎಂದು ಕೇಳಿದರು.
ಮಂಡಲ್ ವರದಿಯನ್ನು ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಅನುಷ್ಠಾನ ಮಾಡಿದೆಯೇ? ಕಾಂಗ್ರೆಸ್ ಪಕ್ಷ ಅದಕ್ಕೆ ಬೆಂಬಲ ಕೊಟ್ಟಿತ್ತೇ? 1956ರಲ್ಲಿ ಕಾಕಾ ಕಾಲೇಕರ್ ವರದಿಯನ್ನು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಕಸದ ಬುಟ್ಟಿಗೆ ಹಾಕಿದವರಲ್ಲವೇ? ಅಹಿಂದ ವರ್ಗಗಳನ್ನು ತಮ್ಮ ಮನೆಯಾಳುಗಳ ರೀತಿ ನೆಹರು-ಗಾಂಧಿ ಕುಟುಂಬ ನೋಡಿಕೊಂಡು ಬಂದಿದೆ. ಇಂಥ ಕಾಂಗ್ರೆಸ್ ಪಕ್ಷದಿಂದ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಲು ಸಾಧ್ಯವೇ ಎಂದು ವಿಜಯೇಂದ್ರ ಪ್ರಶ್ನಿಸಿದರು.
ಬಿಹಾರ ರಾಜ್ಯದ ಚುನಾವಣೆ ಸಮೀಪಿಸುತ್ತಿರುವ ಕಾರಣ ಎಐಸಿಸಿಯ ಒಬಿಸಿ ಸಮಿತಿಯು ಸಿದ್ದರಾಮಯ್ಯನವರ ಮೂಲಕ ಹಿಂದುಳಿದ ವರ್ಗಗಳ ಕುರಿತು ಮೊಸಳೆ ಕಣ್ಣೀರು ಹಾಕುತ್ತಿದೆ. ಸ್ವಾತಂತ್ರ್ಯಾ ನಂತರದ 75 ವರ್ಷಗಳಲ್ಲಿ 55-60 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ದೇಶ-ರಾಜ್ಯದ ಆಡಳಿತ ನಡೆಸಿದೆ. 2025ರಲ್ಲಿಯೂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ, ಈ ದೇಶ-ರಾಜ್ಯದಲ್ಲಿ ಅಹಿಂದ ವರ್ಗಗಳಿಗೆ ಅನ್ಯಾಯವಾಗುತ್ತಿದೆ ಎಂದು ಅನಿಸಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷ ಹೊಣೆ ಹೊರಬೇಕು ಎಂದು ಅವರು ಹೇಳಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಶಾಸಕರಾದ ಮಾನಪ್ಪ ಡಿ.ವಜ್ಜಲ್, ಡಾ.ಎಸ್.ಶಿವರಾಜ್ ಪಾಟೀಲ್ ಅವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಟ ವರ್ಗಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು. ಇವರ ಯೋಗ್ಯತೆಗೆ ಅದು ಸಾಧ್ಯವಿಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇದನ್ನು ಒಪ್ಪಲು ಅಸಾಧ್ಯ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಕಾಂಗ್ರೆಸ್ಸಿನಿಂದ ನಾವು ಆತಂಕ ಪಡುವ ಪ್ರಶ್ನೆಯೇ ಇಲ್ಲ. ಮೋದಿ ಅವರು ಜಾತಿ ಜನಗಣತಿ ಬಗ್ಗೆ ಪ್ರಾಮಾಣಿಕ ಕಳಕಳಿಯಿಂದ ನಿರ್ಧಾರ ಮಾಡಿದ್ದಾರೆ.
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ







