ವಸತಿ ಸಚಿವರ ರಾಜಿನಾಮೆ ಪಡೆಯುವ ಧೈರ್ಯ ಸಿಎಂಗೆ ಇದೆಯಾ?: ಎಚ್.ಡಿ.ಕುಮಾರಸ್ವಾಮಿ
"ಅಲ್ಪಸಂಖ್ಯಾತರ ಹೆಸರಿನಲ್ಲಿ 625 ಕೋಟಿ ರೂ.ಗೋಲ್ ಮಾಲ್"

ಎಚ್.ಡಿ.ಕುಮಾರಸ್ವಾಮಿ
ಹೊಸದಿಲ್ಲಿ: ವಸತಿ ಇಲಾಖೆಯಲ್ಲಿ ಸಾಲು ಸಾಲು ಹಗರಣಗಳು ನಡೆಯುತ್ತಿವೆ. ಆಡಳಿತ ಪಕ್ಷದ ಶಾಸಕರೇ ಅಕ್ರಮಗಳ ಬಗ್ಗೆ ಬಹಿರಂಗವಾಗಿ ಹೇಳಿದ್ದಾರೆ. ವಸತಿ ಸಚಿವರ ರಾಜಿನಾಮೆ ಪಡೆಯುವ ನೈತಿಕತೆ, ಯೋಗ್ಯತೆ, ಧೈರ್ಯ ಈ ಮುಖ್ಯಮಂತ್ರಿಗೆ ಇದೆಯಾ? ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.
ಸೋಮವಾರ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿರಿಯ ಶಾಸಕ ಬಿ.ಆರ್.ಪಾಟೀಲ್ ಅವರ ಕ್ಷೇತ್ರದಲ್ಲಿ 950 ಮನೆಗಳನ್ನು ಶಾಸಕರ ಗಮನಕ್ಕೆ ಬಾರದಂತೆ ವಸತಿ ಇಲಾಖೆಯಿಂದ ನೀಡಿದ್ದಾರೆ. ಪಾಟೀಲ್ ಅವರು ವಸತಿ ಸಚಿವರ ಆಪ್ತ ಕಾರ್ಯದರ್ಶಿಗೆ ಕರೆ ಮಾಡಿ ಪ್ರಶ್ನಿಸಿದರೆ, ಅವರು ಏನು ಉತ್ತರ ನೀಡಿದ್ದಾರೆ ಎಂಬುದು ಆಡಿಯೋ ಮೂಲಕ ವೈರಲ್ ಆಗಿದೆ ಎಂದು ಹೇಳಿದರು.
ನಿಖರವಾದ ಪ್ರಕರಣ ಇದ್ದರೆ ದೂರು ಕೊಡಿ, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಾಸಕರಿಗೆ ವಸತಿ ಸಚಿವ ಆಪ್ತ ಕಾರ್ಯದರ್ಶಿ ಉತ್ತರ ಕೊಡುತ್ತಾರೆ. ಆ ವ್ಯಕ್ತಿಗೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೊಟ್ಟಿದ್ದಾರಾ ಸಚಿವರು? ವಸೂಲಿ ಮಾಡುವ ಪವರ್ ಕೊಟ್ಟಿದ್ದಾರಷ್ಟೇ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಇಲಾಖೆಯಲ್ಲಿ ಈ ಮಟ್ಟಕ್ಕೆ ಅವ್ಯವಹಾರ ಆಗಿದೆ ಎಂದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೆಯೇ ಎನ್ನುವ ಅನುಮಾನ ಬರುತ್ತಿದೆ. ಉಪ ಮುಖ್ಯಮಂತ್ರಿಯವರು ಬಿ.ಆರ್. ಪಾಟೀಲ್ ಹೇಳಿದ್ದು ಸುಳ್ಳು ಎನ್ನುತ್ತಿದ್ದಾರೆ. ಕಾಗವಾಡ ಶಾಸಕ ರಾಜುಕಾಗೆ ಕೂಡ ಇದೇ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿ ಉದ್ದೇಶ ಏನು? ಶಾಸಕಾಂಗ ಪಕ್ಷದಲ್ಲಿ ಅನುದಾನ ಕೊಡುತ್ತೇವೆ, ಅಭಿವೃದ್ಧಿ ಮಾಡುತ್ತೇವೆ ಎಂದವರು ಈಗ ಶಾಸಕರಿಗೆ ಕಮೀಷನ್ ಕಿರುಕುಳ ಕೊಡುತ್ತಿದ್ದಾರೆ. ಶಾಸಕರು ಕ್ಷೇತ್ರಗಳಿಗೆ ಹೋಗದ ರೀತಿಯಲ್ಲಿ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಅವರು ವಸತಿ ಸಚಿವರು ರಾಜಿನಾಮೆ ನೀಡಲಿ, ಅಕ್ರಮಗಳ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ. ನಿಮ್ಮ ಪಕ್ಷದ ಶಾಸಕರೇ ನಿಮ್ಮ ಮುಖಕ್ಕೆ ಮಂಗಳಾರತಿ ಎತ್ತುತ್ತಿದ್ದಾರೆ. ನಿಮ್ಮ ಶಾಸಕರ ಪರಿಸ್ಥಿತಿಯೇ ಹೀಗಾದರೆ ಜೆಡಿಎಸ್, ಬಿಜೆಪಿ ಶಾಸಕರ ಪರಿಸ್ಥಿತಿ ಏನು? ಅನುದಾನಕ್ಕಾಗಿ ಶಾಸಕರು ಅಲೆಯುತ್ತಿದ್ದಾರೆ. ಯಾರೋ ಮಧ್ಯದಲ್ಲಿ ನಿಂತಿದ್ದಾರೋ ಅವರು ಕಲೆಕ್ಷನ್ ಮಾಡುತ್ತಿದ್ದಾರೆ. ಶಾಸಕರು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಬರೆದಿದ್ದ ‘ತಬರನ ಕಥೆ’ ಎಂಬ ಕಥೆಯನ್ನು ಗಿರೀಶ್ ಕಾಸರವಳ್ಳಿ ಸಿನಿಮಾ ಮಾಡಿದ್ದರು. ವಾಚ್ ಮನ್ ಒಬ್ಬ ತನ್ನ ಪಿಂಚಣಿಗಾಗಿ ಸರಕಾರಿ ಕಚೇರಿಗಳಿಗೆ ಅಲೆ ಅಲೆದು ಬಸವಳಿಯುವ ಕಥೆ ಅದು. ಅಂಥದ್ದೇ ಪರಿಸ್ಥಿತಿ ರಾಜ್ಯದ ಶಾಸಕರಿಗೂ ಬಂದಿರುವುದು ದುರದೃಷ್ಟಕರ. ಶಾಸಕರು ಯೋಜನೆಗಳಾಗಿ ಮಂತ್ರಿಗಳು, ಇಂಜಿಯರ್ ಗಳ ಕಚೇರಿಗಳ ಸುತ್ತ ತಬರನಂತೆ ಸುತ್ತುತ್ತಿದ್ದಾರೆ. ರಾಜ್ಯದಲ್ಲಿ ಇಂಥ ದುಸ್ಥಿತಿ ಹಿಂದೆಂದೂ ಇರಲಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಪರಿಸ್ಥಿತಿ ಹೇಗಾಗಿದೆ ಎಂದರೆ ಆಲಿಬಾಬಾ ಮೂವತ್ತನಾಲ್ಕು ಕಳ್ಳರು ಎನ್ನುವಂಥ ರೀತಿ ಆಗಿದೆ. ಮುಖ್ಯಮಂತ್ರಿ, ಮಂತ್ರಿಗಳು ಕಮೀಷನ್ ಉಡಾಯಿಸಿ ಮೋಜು ಮಾಡುತ್ತಿದ್ದರೆ ಶಾಸಕರು ತಮ್ಮ ಕ್ಷೇತ್ರಗಳಿಗೆ ಮುಖ ಹಾಕಲಾರದ ದುಸ್ಥಿತಿಯಲ್ಲಿ ಇದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೆನಿದೆ? ಎಂದು ಅವರು ಕಿಡಿಗಾರಿದರು.
ಮುಖ್ಯಮಂತ್ರಿ ಬಳಿ ಈ ಸರಕಾರಕ್ಕಿಂತಲೂ ದೊಡ್ಡವರು ಇದ್ದಾರೆ. ಆದುದರಿಂದಲೇ, ಸರಕಾರದ ಹಾಗೂ ಹಣಕಾಸು ಇಲಾಖೆಯ ಒಪ್ಪಿಗೆಯನ್ನೂ ಪಡೆಯದೇ 625 ಕೋಟಿ ರೂ.ಗಳಿಗೂ ಹೆಚ್ಚು ಹಣ ಬಿಡುಗಡೆ ಆಗಿದೆ. ಸಂಪುಟದ ಒಪ್ಪಿಗೆ ಪಡೆಯದೇ ಹಣ ವೆಚ್ಚ ಮಾಡಲಾಗಿದೆ. ಅಲ್ಪಸಂಖ್ಯಾತರಿಗೆ ಸೇರಿದ ಕೋಟಿ ಕೋಟಿ ಹಣ ಲೂಟಿ ಆಗಿದೆ. ಈ ಮುಖ್ಯಮಂತ್ರಿಗೆ ಅಧಿಕಾರದಲ್ಲಿ ಮುಂದುವರೆಯಲು ಯೋಗ್ಯತೆ ಇದೆಯಾ? ಎಂದು ಅವರು ಕಿಡಿಗಾರಿದರು.
ಕಾನೂನಾತ್ಮಕವಾಗಿ ಅಲ್ಪಸಂಖ್ಯಾತರಿಗೆ ಎಷ್ಟು ಬೇಕಾದರೂ ನೆರವು ಕೊಡಿ. ಆದರೆ, ಕೊಳ್ಳೆ ಹೊಡೆಯಲು ಹಣಕಾಸು ಇಲಾಖೆ ಒಪ್ಪಿಗೆಯೇ ಇಲ್ಲದೆ ಹಣ ಬಿಡುಗಡೆ ಹೇಗಾಯಿತು? ಇದಕ್ಕೆ ಹೊಣೆ ಯಾರು? ಎಲ್ಲರೂ ಕಾನೂನಿನ ಕಟಕಟೆಯಲ್ಲಿ ನಿಲ್ಲಲೇಬೇಕು ಎಂದು ಎಂದು ಕುಮಾರಸ್ವಾಂಇ ಹೇಳಿದರು.
ಮುಖ್ಯಮಂತ್ರಿ ಕಚೇರಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಅತೀಕ್ ಅವರನ್ನು ಯಾಕೆ ತೆಗೆದರು? ಮುಂದಿನ ಮೂರು ವರ್ಷಕ್ಕೆ 1000 ಕೋಟಿ ರೂ. ಅನುದಾನದ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಿದ್ದರು. ಈ ಹಣದಲ್ಲಿ ಅಲ್ಪಸಂಖ್ಯಾತರ ಹೆಸರು ಹೇಳಿಕೊಂಡು ಎಷ್ಟು ಹಣ ತಿಂದಿದ್ದೀರಿ? ಈ ಅತೀಕ್ ಎನ್ನುವ ವ್ಯಕ್ತಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಏನೆಲ್ಲಾ ಮಾಡಿದ್ದರು ಎನ್ನುವುದು ನನಗೆ ಗೊತ್ತಿದೆ. ಅವರಿಂದ ಏನೇನು ಮಾಡಿಸಿದರು ಎನ್ನುವುದೂ ಗೊತ್ತಿದೆ.
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ







