ತನಿಖಾ ಸಂಸ್ಥೆಗಳು ಒತ್ತಡದಲ್ಲಿ ಕೆಲಸ ಮಾಡುತ್ತಿವೆ ಎಂಬ ಸಂಶಯವಿದೆ: ನ್ಯಾ.ಎನ್. ಸಂತೋಷ್ ಹೆಗ್ಡೆ

ಎನ್.ಸಂತೋಷ್ ಹೆಗ್ಡೆ
ಬೆಂಗಳೂರು/ಹಾವೇರಿ: ಎಲ್ಲ ತನಿಖಾ ಸಂಸ್ಥೆಗಳು ಆಡಳಿತ ಪಕ್ಷದ ಒತ್ತಡದಲ್ಲಿ ಕೆಲಸ ಮಾಡುತ್ತಿವೆ ಎಂಬ ಸಂಶಯ ಜನಸಾಮಾನ್ಯರಲ್ಲಿ ಹುಟ್ಟಿಕೊಂಡಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಬುಧವಾರ ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರಕಾರಗಳ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ಆಯಾ ಆಡಳಿತ ಪಕ್ಷ ತನ್ನ ಇಚ್ಛೆಗನುಸಾರ ನಡೆಸಿಕೊಳ್ಳುತ್ತದೆ, ಸರಕಾರದ ಒತ್ತಡದಲ್ಲಿ ಸಂಸ್ಥೆಗಳು ಸೂಕ್ತವಾದ ವಿಚಾರಣೆ ನಡೆಸುವುದಿಲ್ಲ. ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳಿರುವ ಕಾರಣ ಈ ಸಂಸ್ಥೆಗಳ ಮೇಲೆ ಜನರಿಗೆ ಸಂಶಯ ಹುಟ್ಟಿದೆ ಎಂದರು.
ರಾಜಕೀಯಕ್ಕೆ ಸಂಬಂಧಪಟ್ಟ ಎಲ್ಲ ಪ್ರಕರಣಗಳ ತನಿಖೆಗಳನ್ನು ನಡೆಸಲು ಒಂದು ಸ್ವತಂತ್ರವಾದ ತನಿಖಾ ಸಂಸ್ಥೆಯನ್ನು ಸ್ಥಾಪಿಸುವ ಅನಿವಾರ್ಯತೆಯಿದೆ. ಈ ಸಂಬಂಧ ಗಂಭೀರವಾದ ಚಿಂತನೆ ನಡೆಯಬೇಕು ಎಂದು ನ್ಯಾ.ಎನ್.ಸಂತೋಷ್ ಹೆಗ್ಡೆ ತಿಳಿಸಿದರು.
ರಾಜೀನಾಮೆ ಕೊಡಬೇಕೆಂದು ಕಾನೂನು ಹೇಳುವುದಿಲ್ಲ:
‘ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಿತ್ತೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನ್ಯಾ.ಸಂತೋಷ್ ಹೆಗ್ಡೆ, ‘ರಾಜಕಾರಣದಲ್ಲಿ ಹಿಂದಿನಿಂದಲೂ ಮಂತ್ರಿಗಳ ಮೇಲೆ ಆರೋಪಗಳು ಕೇಳಿ ಬಂದರೆ ಹೊಣೆ ಹೊತ್ತು ರಾಜೀನಾಮೆ ಕೊಡುವುದು ಪದ್ಧತಿಯಾಗಿ ನಡೆದುಬಂದಿದೆ. ಆರೋಪಗಳು ಸತ್ಯವೋ, ಸುಳ್ಳೋ ಸಾಬೀತಾಗುವವರೆಗೆ ಜವಾಬ್ದಾರಿ ಹೊತ್ತುಕೊಂಡು ರಾಜೀನಾಮೆ ಕೊಟ್ಟು ತನಿಖೆ ಎದುರಿಸುವವರ ಮೇಲೆ ಜನರ ಗೌರವವೂ ಹೆಚ್ಚುತ್ತದೆ. ಆದರೆ, ರಾಜೀನಾಮೆ ಕೊಟ್ಟೇ ತನಿಖೆ ಎದುರಿಸಬೇಕೆಂದು ಕಾನೂನು ಹೇಳುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.