ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸುವುದನ್ನು ಕ್ರೀಡೆ ಕಲಿಸುತ್ತದೆ : ಡಾ.ಜಿ.ಪರಮೇಶ್ವರ್
ಎರಡನೇ ಏಷ್ಯನ್ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್‍ಗೆ ಚಾಲನೆ

ಬೆಂಗಳೂರು : ಕ್ರೀಡೆಯು ಜೀವನದಲ್ಲಿ ಗೆಲುವು ಮತ್ತು ಸೋಲನ್ನು ಸಮಾನ ಮನೋಭಾವದಿಂದ ಸ್ವೀಕರಿಸುವ ಮಹತ್ವದ ಪಾಠವನ್ನು ಕಲಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.
ರವಿವಾರ ಬೆಂಗಳೂರಿನ ಪಿಡಿಸಿಎಸ್‍ಇ ಡಾಲ್ಫಿನ್ ಅಕ್ವಾಟಿಕ್ಸ್ ನಲ್ಲಿ ಆಯೋಜಿಸಿದ್ದ 2ನೇ ಏಷ್ಯನ್ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್-2026ನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಭಾಗವಹಿಸುವುದು ಕೇವಲ ಪದಕ ಗೆಲ್ಲುವುದಕ್ಕೆ ಸೀಮಿತವಲ್ಲ. ಶಿಸ್ತು, ಮಾನಸಿಕ ದೃಢತೆ ಹಾಗೂ ಹಿನ್ನಡೆಗಳನ್ನು ಸ್ವೀಕರಿಸಿ ಮುಂದುವರಿಯುವ ಮನೋಭಾವವನ್ನು ಕ್ರೀಡೆ ಬೆಳೆಸುತ್ತದೆ ಎಂದು ನುಡಿದರು.
ಗೆಲುವು ಮತ್ತು ಸೋಲು ಎರಡೂ ಜೀವನದ ಭಾಗ. ಸೋತಾಗಲೂ ಅದರಿಂದ ಕಲಿಯಬೇಕಾದ ಪಾಠವಿರುತ್ತದೆ. ಸೋಲನ್ನು ಸ್ವೀಕರಿಸಿ, ಅದರಿಂದ ಪಾಠ ಕಲಿತು ಮುಂದುವರಿಯುವುದನ್ನು ಕ್ರೀಡೆ ಕಲಿಸುತ್ತದೆ. ಆದುದರಿಂದ ಕ್ರೀಡಾಪಟುಗಳಾಗಿ ನಾವು ಗೆಲುವು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳನ್ನು ಅಭಿನಂದಿಸಿದ ಪರಮೇಶ್ವರ್, ಅವರ ಸಾಧನೆಯಲ್ಲಿ ತರಬೇತುದಾರರು, ಕೋಚ್‍ಗಳು ಮತ್ತು ವ್ಯವಸ್ಥಾಪಕರ ಪರಿಶ್ರಮ ಅಡಗಿದೆ. ಭಾರತೀಯ ಕ್ರೀಡಾಪಟುಗಳು ಸುಮಾರು 85 ಪದಕಗಳನ್ನು ಗೆದ್ದಿದ್ದು, ಅದರಲ್ಲಿ 21ಚಿನ್ನದ ಪದಕಗಳಿವೆ. ದೇಶದ ಒಟ್ಟು ಪದಕ ಗಳಿಕೆಗೆ ಕರ್ನಾಟಕದ ಕ್ರೀಡಾಪಟುಗಳೂ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕ್ರೀಡಾ ಸಾಧನೆಯನ್ನು ಉತ್ತೇಜಿಸಲು ರಾಜ್ಯ ಸರಕಾರ ಬದ್ಧವಾಗಿದ್ದು, ಹಿಂದಿನ ಸಂದರ್ಭಗಳಿಗೆ ಹೋಲಿಸಿದರೆ ಪದಕ ವಿಜೇತ ಕ್ರೀಡಾಪಟುಗಳಿಗೆ ನೀಡಲಾಗುವ ಬಹುಮಾನ ಮೊತ್ತವನ್ನು ಸರಕಾರ ಹೆಚ್ಚಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಈ ಚಾಂಪಿಯನ್‍ಶಿಪ್ ಆಯೋಜಿಸುವ ಜವಾಬ್ದಾರಿಯನ್ನು ಹೊತ್ತ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್‍ನ ಕಾರ್ಯವನ್ನು ಶ್ಲಾಘಿಸಿದ ಅವರು, ರಾಷ್ಟ್ರೀಯ ಈಜು ಚಾಂಪಿಯನ್‍ಶಿಪ್ ಅನ್ನು 33 ಬಾರಿ ಗೆದ್ದಿರುವುದು ಸಂಘದ ವಿಶಿಷ್ಟ ಸಾಧನೆಯಾಗಿದೆ ಎಂದು ಹೇಳಿದರು.
ಭಾರತದ ವಿವಿಧ ಭಾಗಗಳ ಜೊತೆಗೆ ಏಷ್ಯಾ ದ ಹಲವು ದೇಶಗಳಿಂದ ಆಗಮಿಸಿರುವ ಕ್ರೀಡಾಪಟುಗಳನ್ನು ಸ್ವಾಗತಿಸಿದರು. ಎಲ್ಲ ಸ್ಪರ್ಧಾಳುಗಳಿಗೂ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ಕೆ.ಗೋವಿಂದರಾಜ್, ಕ್ರೀಡಾ ಇಲಾಖೆಯ ಆಯುಕ್ತ ಎಂ.ಎನ್. ಅನುಚೇತ್, ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಅಧ್ಯಕ್ಷ ಗೋಪಾಲ್ ಹೊಸೂರ್, ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಮೋನಲ್ ಚೋಕ್ಸಿ, ಕ್ರೀಡಾಪಟುಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.






