"ಹೈಕಮಾಂಡ್ ಯಾವಾಗ ಔಷಧಿ ಕೊಡಬೇಕು ಕೊಡುತ್ತಾರೆ": ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗಳಿಗೆ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ

ಗೃಹ ಸಚಿವ ಡಾ.ಜಿ.ಪರಮೇಶ್ವರ್ (PTI)
ಬೆಂಗಳೂರು: ಪವರ್ ಶೇರಿಂಗ್ ಸಂಬಂಧ ಪ್ರತಿನಿತ್ಯ ಮಾಧ್ಯಮಗಳಲ್ಲಿ ಬರುತ್ತಿದೆ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದ್ದು, ಯಾವಾಗ ಔಷಧಿ ಕೊಡಬೇಕು ಕೊಡುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪವರ್ ಶೇರಿಂಗ್ ಗೊಂದಲ ನಿವಾರಿಸಬೇಕು ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನೂ ಗೊಂದಲ ಬಗೆಹರಿಸಿ ಅಂತಾನೇ ಹೇಳುತ್ತೇನೆ. ಅವರು ಪವರ್ ಶೇರಿಂಗ್ ಬಗ್ಗೆ ಗೊಂದಲ ಬಗೆಹರಿಸಿ ಎಂದಿರುವುದು ಸರಿಯಿದೆ ಎಂದರು.
ಬಿಹಾರ ಚುನಾವಣೆ ನಂತರ ರಾಜ್ಯದಲ್ಲಿ ಬೆಳವಣಿಗೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಚುನಾವಣೆ ನಂತರ ಬದಲಾವಣೆ ಅಂತ ಏನೂ ಇಲ್ಲ. ಹೈಕಮಾಂಡ್ ಬದಲಾವಣೆ ಮಾಡಬೇಕು ಅಂದರೆ ಯಾವತ್ತು ಬೇಕಾದರೂ ಮಾಡುತ್ತಾರೆ. ಬದಲಾವಣೆ ಚುನಾವಣೆ ನೋಡಿ ಮಾಡುವುದಿಲ್ಲ ಎಂದು ಜಿ.ಪರಮೇಶ್ವರ್ ಹೇಳಿದರು.
ಸಿಎಂ, ಡಿಸಿಎಂ ಸೇರಿದಂತೆ ನಮಗೆಲ್ಲರಿಗೂ ಜವಾಬ್ದಾರಿ ಇದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗುತ್ತಿದೆ. ಆ ಕಡೆ ನಾವು ಮೊದಲು ಗಮನ ಹರಿಸಬೇಕು. ದಕ್ಷಿಣ ಕರ್ನಾಟಕದಲ್ಲಿ ಅನೇಕ ಸಮಸ್ಯೆಗಳಿವೆ. ಬೆಂಗಳೂರಿನಲ್ಲಿ ಸಹ ಸಮಸ್ಯೆಗಳು ಇವೆ. ಇವೆಲ್ಲವನ್ನು ಬಗೆಹರಿಸುವುದು ನಮ್ಮ ಆದ್ಯತೆ. ಆದ್ಯತೆ ಮೇಲೆ ನಾವು ಹೋಗಬೇಕು. ಬದಲಾವಣೆ ಅದು ಇದು ಅಂತ ಗಮನವಿಲ್ಲ ಎಂದು ಜಿ.ಪರಮೇಶ್ವರ್ ತಿಳಿಸಿದರು.
ವಕೀಲನನ್ನು ಮೊದಲು ಬಂಧಿಸಿ:
ಸುಪ್ರೀಂಕೋರ್ಟ್ ಸಿಜೆಐ ಮೇಲೆ ಶೂ ಎಸೆದ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್, ಇದು ಒಬ್ಬ ಗವಾಯಿಯವರ ಪ್ರಶ್ನೆ ಅಲ್ಲ. ಆ ಸ್ಥಾನಕ್ಕೆ, ಸಂವಿಧಾನಕ್ಕೆ ಮಾಡಿದ ಅಪಮಾನ. ಅಲ್ಲಿಯ ಭದ್ರತಾ ವ್ಯವಸ್ಥೆ ವಿಫಲವಾಗಿದೆ. ಪರಮೋಚ್ಚ ನ್ಯಾಯಾಲಯದಲ್ಲಿ ಇಂತಹ ಘಟನೆ ನಡೆಯುತ್ತದೆ ಅಂದ್ರೆ ಏನರ್ಥ? ಇಡೀ ದೇಶ ಇದನ್ನು ಖಂಡಿಸಬೇಕು. ಜೊತೆಗೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಆ ವಕೀಲನನ್ನು ಮೊದಲು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ನಾನು ಪ್ರಧಾನಿಗಳಿಗೆ, ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.







