ವಿದೇಶಿ ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣ ಸಾಧಿಸಲು ಯುಜಿಸಿಗೆ ಪತ್ರ : ಡಾ.ಎಂ.ಸಿ. ಸುಧಾಕರ್

ಬೆಂಗಳೂರು : ಕರ್ನಾಟಕ ಸೇರಿದಂತೆ ದೇಶಾದ್ಯಂತ ವಿದೇಶಿ ವಿಶ್ವವಿದ್ಯಾಲಯಗಳು ಶಾಖೆಗಳನ್ನು ಆರಂಭಿಸುತ್ತಿದ್ದು, ಇವುಗಳ ಮೇಲೆ ಹೇಗೆ ನಿಯಂತ್ರಣ ಸಾಧಿಸಬೇಕು ಎಂದು ಮಾಹಿತಿ ಒದಗಿಸಲು ವಿಶ್ವವಿದ್ಯಾಲಯಗಳ ಅನುದಾನ ಆಯೋಗಕ್ಕೆ(ಯುಜಿಸಿ) ಪತ್ರ ಬರೆಯಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಹೇಳಿದ್ದಾರೆ.
ಗುರುವಾರ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವೇಶಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಇಲಾಖೆ ಜವಾಬ್ದಾರಿ ವಹಿಸಲಿದೆ. ಆದರೆ ವಿದೇಶಿ ವಿಶ್ವವಿದ್ಯಾಲಯಗಳಿಗೆ ಯಾರೊಬ್ಬರ ಕಡಿವಾಣ ಇರುವುದಿಲ್ಲ. ಅವರದ್ದೇ ನಿಯಮಗಳು, ಪಠ್ಯಕ್ರಮ, ಶುಲ್ಕ ವಿಧಿಸುತ್ತವೆ ಎಂದರು.
ವಿದೇಶಿ ವಿಶ್ವವಿದ್ಯಾಲಯಗಳು ಯುಜಿಸಿ ಅನುಮತಿ ಪಡೆದು ದೇಶಾದ್ಯಂತ ತಮ್ಮ ಶಾಖೆಗಳನ್ನು ಆರಂಭಿಸುತ್ತಿದ್ದು, ರಾಜ್ಯ ಸರಕಾರದ ನಿಯಂತ್ರಣದಲ್ಲಿರದ ಕಾರಣ ಕ್ಯಾಂಪಸ್‍ನ್ನು ಹಠಾತ್ತನೇ ಸ್ಥಗಿತಗೊಳಿಸುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳಿಗೆ ಕಿರಿಕಿರಿ ಮಾಡಿದರೆ ಭವಿಷ್ಯದ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಈ ಬಗ್ಗೆ ಸ್ಪಷ್ಟತೆ ಕೋರಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳ ಮೇಲೆಯೇ ರಾಜ್ಯ ಸರಕಾರದ ಹಕ್ಕಿಲ್ಲದಿರುವುವಾಗ, ವಿದೇಶಿ ವಿಶ್ವವಿದ್ಯಾಲಯಗಳ ಮೇಲೆ ಹೇಗೆ ಹಕ್ಕು ಹೊಂದಲು ಸಾಧ್ಯ. ನೀತಿ ಮತ್ತು ಪಠ್ಯಕ್ರಮಗಳ ಆಯ್ಕೆ ಸ್ವಾತಂತ್ರ್ಯ ಅವರಿಗೆ ಇರುತ್ತದೆ. ರಾಜ್ಯ ಶಿಕ್ಷಣ ನೀತಿ ವಿದೇಶಿ ವಿವಿಗಳಿಗೆ ಅನ್ವಯವಾಗುವುದಿಲ್ಲ ಎಂದು ಅವರು ತಿಳಿಸಿದರು.







