ಧರ್ಮಸ್ಥಳ ಪ್ರಕರಣದ ತನಿಖೆ ನಡೆಸಿದ್ದ ಡಾ.ಪ್ರಣಬ್ ಮೊಹಂತಿ ಸಿಐಡಿ ಡಿಜಿಪಿಯಾಗಿ ನೇಮಕ

ಡಾ.ಪ್ರಣಬ್ ಮೊಹಂತಿ
ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಡಾ.ಪ್ರಣಬ್ ಮೊಹಂತಿ ಸಹಿತ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ರವಿವಾರ ಅಧಿಸೂಚನೆ ಹೊರಡಿಸಿದೆ
ಡಾ.ಪ್ರಣಬ್ ಮೊಹಂತಿ ಅವರನ್ನು ಆಂತರಿಕ ಭದ್ರತಾ ವಿಭಾಗದ ಪ್ರಸ್ತುತ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆಯಿಂದ ಬೆಂಗಳೂರು ಅಪರಾಧ ತನಿಖಾ ಇಲಾಖೆ(ಸಿಐಡಿ), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಡಿಜಿಪಿಯನ್ನಾಗಿ ವರ್ಗಾಯಿಸಲಾಗಿದೆ.
ಇದರೊಂದಿಗೆ, ಮೊಹಂತಿ ಅವರಿಗೆ ಬೆಂಗಳೂರಿನ ಅಪರಾಧ ತನಿಖಾ ಇಲಾಖೆಯ ಮಹಾನಿರ್ದೇಶಕ (ಸೈಬರ್ ಅಪರಾಧಗಳು) ಹುದ್ದೆಯ ಏಕಕಾಲಿಕ ಉಸ್ತುವಾರಿಯನ್ನೂ ನೀಡಲಾಗಿದೆ. ಮುಖ್ಯವಾಗಿ, ಮೊಹಂತಿ ಅವರು ರಾಜ್ಯಾದ್ಯಂತ ಸೈಬರ್ ಅಪರಾಧಗಳನ್ನು ನಿಭಾಯಿಸಲು ಮತ್ತು ತನಿಖೆ ಮಾಡಲು ಸ್ಥಾಪಿಸಲಾದ ಸೈಬರ್ ಕಮಾಂಡ್ ಘಟಕದ(ಸಿಸಿಯು) ಮುಖ್ಯಸ್ಥರಾಗಿ ಮುಂದುವರಿಯುತ್ತಾರೆ ಎಂದು ತಿಳಿಸಲಾಗಿದೆ.
ರಾಜ್ಯದಲ್ಲಿ ಸಂಚಲನ ಸೃಷ್ಠಿಸಿದ್ದ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ, ಕೊಲೆ ಮತ್ತು ಹೂತಿಟ್ಟ ಮೃತದೇಹಗಳ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡದ(ಎಸ್ಐಟಿ) ಮುಖ್ಯಸ್ಥರಾಗಿಯೂ ಪ್ರಣಬ್ ಮೊಹಂತಿ ಅವರು ಹೆಸರುವಾಸಿಯಾಗಿದ್ದರು.
ಜೊತೆಗೆ, ಮತ್ತೊಬ್ಬ ಐಪಿಎಸ್ ಅಧಿಕಾರಿ ಡಾ.ಚಂದ್ರಗುಪ್ತ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಬೆಂಗಳೂರಿನ ಗುಪ್ತಚರ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ.




