ಸಿಎಂ ಬದಲಾವಣೆ ಕುರಿತು ಹೇಳಿಕೆ | ಶಾಸಕ ಡಾ.ರಂಗನಾಥ್, ಶಿವರಾಮೇಗೌಡಗೆ ಕೆಪಿಸಿಸಿ ಶಿಸ್ತು ಪಾಲನೆ ಸಮಿತಿ ನೋಟಿಸ್

ಡಾ.ರಂಗನಾಥ್/ ಎಲ್.ಆರ್.ಶಿವರಾಮೇಗೌಡ
ಬೆಂಗಳೂರು, ಅ. 2: ‘ಮುಖ್ಯಮಂತ್ರಿ ಬದಲಾವಣೆ ಕುರಿತು’ ಬಹಿರಂಗವಾಗಿ ಹೇಳಿಕೆ ನೀಡಿದ ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಮತ್ತು ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರಿಗೆ ಕೆಪಿಸಿಸಿ ಶಿಸ್ತು ಪಾಲನೆ ಸಮಿತಿ ಅಧ್ಯಕ್ಷ ಕೆ.ರೆಹ್ಮಾನ್ಖಾನ್ ಅವರು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಗುರುವಾರ ಇಬ್ಬರಿಗೂ ಪ್ರತ್ಯೇಕ ನೋಟಿಸ್ ನೀಡಿರುವ ಕೆ.ರೆಹ್ಮಾನ್ಖಾನ್, ‘ನಿಮ್ಮ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುವುದಲ್ಲದೆ, ಪಕ್ಷದ ಶಿಸ್ತು ಉಲ್ಲಂಘನೆಗೆ ಕಾರಣವಾಗುತ್ತದೆ. ತಮ್ಮ ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ತಾವುಗಳು ಈ ನೋಟೀಸು ತಲುಪಿದ ಒಂದು ವಾರದ ಒಳಗಾಗಿ ಈ ಬಗ್ಗೆ ಸಮಜಾಯಿಷಿ ನೀಡಬೇಕು’ ಎಂದು ಸೂಚಿಸಿದ್ದಾರೆ.
‘ಮುಖ್ಯಮಂತ್ರಿ ಬದಲಾವಣೆ ವಿಷಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಗೊಂದಲ ಹಾಗೂ ಪಕ್ಷಕ್ಕೆ ಮುಜುಗರ ಉಂಟಾಗುವ ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದು ಎಂದು ಎಐಸಿಸಿ ಸೂಚನೆ ಇದ್ದಾಗ್ಯೂ ತಾವು ಈ ಬಗ್ಗೆ ಹೇಳಿಕೆ ನೀಡಿದ್ದೀರಿ’ ಎಂದು ರೆಹ್ಮಾನ್ಖಾನ್ ಅವರು ತಮ್ಮ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.





